ಜಿಲ್ಲೆ

ಆರನೇ ಗ್ಯಾರಂಟಿ ಜಾರಿ ಮಾಡಿ

Kopala - Raveendra V K

ಕೊಪ್ಪಳ: ಕೊಟ್ಟ ಮಾತಿನಂತೆ ಆರನೇ ಗ್ಯಾರಂಟಿ ಜಾರಿ ಮಾಡುವಂತೆ ಒತ್ತಾಯಿಸಿ ಬಿಸಿಯೂಟ ನೌಕರರು ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಸದೆ ಪ್ರಿಯಾಂಕ ಗಾಂಧಿ ಚುನಾವಣೆ ವೇಳೆ ಬಿಸಿಯೂಟ ನೌಕರರ ವೇತನ ಹೆಚ್ಚಿಸುವುದಾಗಿ ಘೋಷಿಸಿದ್ದರು. ಇದು ಆರನೇ ಗ್ಯಾರಂಟಿ ಎಂದು ಬಿಂಬಿಸಿಕೊಂಡಿದ್ದರು. ಆದರೆ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ನಮ್ಮ ಬೇಡಿಕೆ ಈಡೇರಿಲ್ಲ. ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ. ಇಡಿಗಂಟು ಮೊತ್ತವೂ ಹೆಚ್ಚಳವಾಗಿಲ್ಲವೆಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಕೊಟ್ಟ ಮಾತಿನಂತೆ ನಮ್ಮ ವೇತನ 6 ಸಾವಿರ ರೂ. ಹೆಚ್ಚಿಸಬೇಕು. ಇಡಿಗಂಟು ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಳ ಮಾಡಿ. ಅಪಘಾತವಾಗಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಿ. ಗಾಯಗೊಂಡರೆ ಚಿಕಿತ್ಸಾ ವೆಚ್ಚ ಭರಿಸಿ. ಎಸ್​ಡಿಎಂಸಿ, ಮುಖ್ಯ ಶಿಕ್ಷಕರ ನಡುವಿನ ಜಂಟಿಖಾತೆ ರದ್ದು ಮಾಡಿ ಮೊದಲಿನ ವ್ಯವಸ್ಥೆ ಜಾರಿಗೊಳಿಸಿ. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ಪಾವತಿಸಬೇಕು. ಪಿಂಚಣಿ ಯೋಜನೆ ಜಾರಿ ಮಾಡಿ. ಒಲೆ ಇನ್ನಿತರ ಬಳಕೆಗೆ ಯೋಗ್ಯವಲ್ಲದ ಅಡುಗೆ ಸಾಮಾನುಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮಕ್ಬೂಲ್​ ರಾಯಚೂರು, ಬಿಸಿಯೂಟ ನೌಕರರಾದ ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ಶರಣಮ್ಮ ಬಂಡಿಹರ್ಲಾಪುರ, ರಾಜೇಶ್ವರಿ ಗಿಣಿಗೇರಿ, ಪದ್ಮಾ ಹುಲಗಿ, ಕಮಲಾದೇವಿ ದೊಡ್ಡಮನಿ, ಅನ್ನಪೂರ್ಣ, ರೆಹಮತಬಿ ಇತರರಿದ್ದರು.