ವಿ.ಕೆ.ರವೀಂದ್ರ ಕೊಪ್ಪಳ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ತಾಯಿ&ಶಿಶು ಮರಣ ಪ್ರಮಾಣ ಕಡಿಮೆ ಇದ್ದರೂ ಮೂರು ವರ್ಷಗಳಲ್ಲಿ 44 ಬಾಣಂತಿ, 1,002 ಶಿಶು ಮರಣ ಸಂಭವಿಸಿದೆ.
ಬಳ್ಳಾರಿ, ಬೆಳಗಾವಿ ಸೇರಿ ಇತರೆಡೆ ಬಾಣಂತಿಯರ ಸಾವು ಜನರಲ್ಲಿ ಆತಂಕ ತಂದಿದೆ. ಹೆರಿಗೆ ಆಗಿ ಪ್ರಮುಖ ಕಾರಣಗಳಿಲ್ಲದಿದ್ದರೂ ಸಾವಾಗಿರುವುದು ಖೇದಕರ. ಇನ್ನು ಅವರ ಸಾವಿಗೆ ಐವಿ (ಗ್ಲುಕೋಸ್ ಸಹಿತ ದ್ರಾವಣ) ಕಳಪೆ ಆಗಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲೂ ತಾಯಿ&ಶಿಶು ಮರಣ ಪ್ರಮಾಣ ತಗ್ಗಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಆದರೂ, ಮುಂಜಾಗ್ರತ ಕ್ರಮ ಕೈಗೊಳ್ಳದಿರುವಿಕೆ, ತಡವಾಗಿ ಆಸ್ಪತ್ರೆಗೆ ಆಗಮಿಸುವುದು, ರಕ್ತದೊತ್ತಡ ಸೇರಿ ಇತರ ಆರೋಗ್ಯ ಸಮಸ್ಯೆಗಳು, ಗರ್ಭಾವಸ್ಥೆಯಲ್ಲಿ ಸಮತೋಲನ ಆಹಾರ ಸೇವಿಸದಿರುವಿಕೆ ಸೇರಿ ವಿವಿಧ ಕಾರಣಗಳಿಂದ ಸಾವುಗಳು ಸಂಭವಿಸುತ್ತಿವೆ.
ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಇತ್ತೀಚಿನ ವರ್ಷಗಳಲ್ಲಿ ತಾಯಿ&ಶಿಶು ಮರಣ ಪ್ರಮಾಣ ಇಳಿಮುಖವಾಗಿದೆ. ಅನ್ಯ ಜಿಲ್ಲೆಗಳ ಸಾವಿನ ಸಂಖ್ಯೆ ತುಲನೆ ಮಾಡಿದಾಗಲೂ ನಿಯಂತ್ರಣದಲ್ಲಿರುವುದು ಕಂಡು ಬರುತ್ತಿದೆ. ಕಳೆದೊಂದು ದಶಕದಿಂದ ಜಿಲ್ಲೆಯಲ್ಲಿ ವೈದ್ಯಕಿಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆರಂಭವಾಗಿದೆ. ಹೆರಿಗೆ ವಿಭಾಗದಲ್ಲಿ ಸೇವೆ ಉತ್ತಮವಾಗಿದ್ದು, ಜಿಲ್ಲೆಯ ವಿವಿಧ ತಾಲೂಕು, ಹೋಬಳಿಗಳಿಂದ ಅಷ್ಟೇ ಅಲ್ಲದೇ ಪಕ್ಕದ ವಿಜಯನಗರ, ಹಗರಿಬೊಮ್ಮನಹಳ್ಳಿ, ಮುಂಡರಗಿ, ಹೂವಿನ ಹಡಗಲಿ ಸೇರಿ ಅನ್ಯ ಜಿಲ್ಲೆಗಳ ಪ್ರಕರಣಗಳು ಕೊಪ್ಪಳ ಜಿಲ್ಲಾ ಬೋಧಕ ಆಸ್ಪತ್ರೆಗೆ ಆಗಮಿಸುತ್ತಿವೆ.
ತಾಲೂಕು ಕೇಂದ್ರಗಳಲ್ಲಿ ಸರಾಸರಿ ತಿಂಗಳಿಗೆ 300 ಹೆರಿಗೆಗಳಾದರೆ, ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚಾಗುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ 500&600 ಹೆರಿಗೆಗಳಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಂದಲೂ ಗಂಭೀರ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತಿದ್ದು ಭಾರ ಹೆಚ್ಚಳವಾಗುತ್ತಿದೆ. ಕಳೆದ ಮೂರು ವರ್ಷಗಳ ಅಂಕಿ&ಅಂಶ ತುಲನೆ ಮಾಡಿದಲ್ಲಿ ತಾಯಿ&ಶಿಶು ಮರಣ ಪ್ರಮಾಣ ಇನ್ನಷ್ಟು ತಗ್ಗಿಸುವ ಅಗತ್ಯವೆನಿಸುತ್ತಿದೆ.
2022&23ರಲ್ಲಿ ಜಿಲ್ಲೆಯಲ್ಲಿ 28,480 ಹೆರಿಗೆಗಳಾಗಿವೆ. ಇವುಗಳಲ್ಲಿ 16 ಬಾಣಂತಿಯರು ಅಸುನೀಗಿದ್ದಾರೆ. 2023&24ರಲ್ಲಿ 18,866 ಡೆಲಿವರಿಗಳಾಗಿದ್ದು, 17 ತಾಯಂದಿರ ಸಾವಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ಮಾಸಾಂತ್ಯಕ್ಕೆ 11 ಬಾಣಂತಿಯರು ಮೃತಪಟ್ಟಿದ್ದು, ಮೂರು ವರ್ಷದಲ್ಲಿ ಒಟ್ಟು 44 ತಾಯಂದಿರ ಸಾವು ಸಂಭವಿಸಿದೆ. ಶಿಶು ಮರಣ ಪ್ರಮಾಣ ಗಮನಿಸಿದಲ್ಲಿ 2022&23ರಲ್ಲಿ 419, ಕಳೆದ ವರ್ಷ 391 ಹಾಗೂ ಈ ವರ್ಷ ಅಕ್ಟೋಬರ್ ತಿಂಗಳ ಅಂತ್ಯಕ್ಕೆ 192 ಶಿಶುಗಳು ಕಣ್ಮುಚ್ಚಿವೆ. ಮೂರು ವರ್ಷದಲ್ಲಿ 1,002 ಶಿಶುಗಳ ಸಾವಾಗಿದ್ದು, ಮರಣ ಪ್ರಮಾಣ ಇನ್ನಷ್ಟು ತಗ್ಗಿಸಬೇಕಿದೆ.
ಐವಿ ದ್ರಾವಣ ಬಳಕೆಗೆ ಬ್ರೇಕ್
ಬಳ್ಳಾರಿ ಬಾಣಂತಿಯರ ಸಾವಿಗೆ ಕಳಪೆ ಐವಿ ದ್ರಾವಣ ಕಾರಣ ಎನ್ನಲಾಗಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆಗೆ ಬ್ರೇಕ್ ಹಾಕಲಾಗಿದೆ. ಆಸ್ಪತ್ರೆಗಳು ಹಾಗೂ ಔಷಧ ಉಗ್ರಾಣಗಳಲ್ಲಿನ ರ್ನಿದಿಷ್ಟ ಕಂಪನಿ ದ್ರಾವಣ ಬಳಸದಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಜಿಲ್ಲೆಯಲ್ಲೂ ಸುಮಾರು 60 ಸಾವಿರ ಐವಿ ದ್ರಾವಣ ಫ್ರೀಜ್ ಮಾಡಲಾಗಿದೆ. ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿದ್ದ ದಾಸ್ತಾನು ಬಳಸದಂತೆ ಸೂಚಿಸಲಾಗಿದೆ. ಗಂಗಾವತಿ 28 ಸಾವಿರ, ಕುಷ್ಟಗಿ 16 ಸಾವಿರ, ಯಲಬುರ್ಗಾ 11 ಸಾವಿರ ಹಾಗೂ ಕೊಪ್ಪಳ ತಾಲೂಕನಲ್ಲಿ 5 ಸಾವಿರ ವೈಲ್ಸ್ ಫ್ರೀಜ್ ಮಾಡಲಾಗಿದೆ. ಪರ್ಯಾಯವಾಗಿ ಸ್ಥಳಿಯವಾಗಿ ಗುಣಮಟ್ಟದ ಐವಿ ಖರೀದಿಸಿ ಬಳಸಲು ಸೂಚಿಸಲಾಗಿದೆ.