ಕೊಪ್ಪಳ: ಗಣಿತ ಶಿಕ್ಷಕರು ವಿಷಯವನ್ನು ಸರಳವಾಗಿ ಮಗುವಿಗೆ ಅರ್ಥವಾಗುವಂತೆ ಬೋಧಿಸಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ಜಿಲ್ಲೆಯ ಗಣಿತ ಶಿಕ್ಷಕರಿಗೆ ಬೋಧನಾ ತಂತ್ರಗಳ ಕುರಿತು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಗುವಿಗೆ ಅರ್ಥವಾಗ ಪದಗಳನ್ನು ಬಳಕೆ ಮಾಡಿ. ಬದುಕಿಗೆ ಗಣಿತ ಬಹುಮುಖ್ಯ. ಓದಿನಲ್ಲಿ ಆಸಕ್ತಿ ಬರುವಂತೆ ಬೋಧಿಸಿ. ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಹೆಚ್ಚಿನ ಮಕ್ಕಳು ಉತ್ತೀರ್ಣರಾಗುವಂತೆ ಪಾಠ ಮಾಡಿ. ಸುಲಭ, ಸರಳ ಬೋಧನಾ ತಂತ್ರ ಬಳಸಿ. ಹೇಗೆ ಪಾಠ ಮಾಡಬೇಕೆಂಬ ಬಗ್ಗೆ ತಿಳಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸದುಪಯೋಗ ಪಡೆಯಿರಿ. ಜಿಲ್ಲೆಯಲ್ಲಿ ಈ ಬಾರಿ ಗಣಿತ ವಿಷಯದಲ್ಲಿ ಶೇ.90ರಷ್ಟಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗುವಂತೆ ಗುರಿ ಹೊಂದಬೇಕಿದೆ. ಇದಕ್ಕೆ ನಿಮ್ಮ ಶ್ರಮವೂ ಅಗತ್ಯ ಎಂದರು.
ಡಿಸಿ ನಲಿನ್ ಅತುಲ್ ಮಾತನಾಡಿ, ಹೇಗೆ ಪಾಠ ಮಾಡಿದರೆ ಮಕ್ಕಳಿಗೆ ಅರ್ಥವಾಗುತ್ತದೆ ಎಂಬುದನ್ನು ಮೊದಲು ನೀವು ಅರಿಯಿರಿ. ವಿಷಯ ಸರಳೀಕರಿಸಿದಷ್ಟು ಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ. ವಿದ್ಯಾರ್ಥಿಗಳ ಅಧ್ಯಯನ ಬಗ್ಗೆ ಗಮನವಿಡಿ. ತರಬೇತಿ ಕಾರ್ಯಾಗಾರ ಏರ್ಪಡಿಸಿದ್ದು ಉತ್ತಮ ಕೆಲಸ. ಎಲ್ಲರೂ ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕೆ.ಎಸ್.ಸಿ.ಎಸ್.ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ ವಿಜಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಡಿಡಿಪಿಐ ಶ್ರೀಶೈಲ ಬಿರಾದಾರ, ಕೆ.ಎಸ್.ಸಿ.ಎಸ್.ಟಿ ಯ ಯೋಜನಾ ಅಭಿಯಂತರರಾದ ಡಾ.ಸೈಯದ್ ಸಮೀರ್, ಗುರುಸ್ವಾಮಿ ಪಿ, ಪ್ರಾಜೆಕ್ಟ್ ಅಸೋಸಿಯೇಟ್ ವಿಶ್ವಪ್ರಸನ್ನ ಇತರರಿದ್ದರು.