ಕೊಪ್ಪಳ: ತಾಲೂಕಿನ ಮಂಗಳಾಪುರ ಗ್ರಾಮಸ್ಥರಿಗೆ ರುದ್ರಭೂಮಿಗಾಗಿ 20 ಗುಂಟೆ ಜಾಗ ಮಂಜೂರು ಮಾಡಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶಿಸಿದ್ದಾರೆ.
ಗ್ರಾಮದಲ್ಲಿ ಸ್ಮಶಾನ ಇರಲಿಲ್ಲ. ಖಾಸಗಿ ಜಮೀನು ನೀಡುವಂತೆ ಹಲವು ಬಾರಿ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ. ಯಾರೋಬ್ಬರು ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಪ್ರತಿ ಗ್ರಾಮಕ್ಕೂ ರುದ್ರಭೂಮಿ ಹಂಚಿಕೆ ಮಾಡುವುದು ಮುಖ್ಯ ಇರುವುದರಿಂದ ಗ್ರಾಮಕ್ಕೆ 20 ಗುಂಟೆ ಜಮೀನು ಹಂಚಿಕೆ ಮಾಡಲಾಗಿದೆ. ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ಕೋಳೂರು ರಸ್ತೆಯಲ್ಲಿದೆ. ಪರಂಪೋಕ್ ಸರ್ಕಾರಿ ಸ.ನಂ 48/*/* ರಲ್ಲಿ 1.05 ಎಕರೆ ಜಮೀನು ಲಭ್ಯವಿದೆ. ರಸ್ತೆ ಸಂಪರ್ಕ ಇದ್ದು ಯಾವುದೇ ತೊಂದರೆ ಇಲ್ಲವೆಂದು ತಹಸೀಲ್ದಾರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಲ್ಲಿ 20 ಗುಂಟೆಯನ್ನು ಮಂಗಳಾಪುರ ಗ್ರಾಮದ ಸಾರ್ವಜನಿಕ ರುದ್ರಭೂಮಿಗಾಗಿ ಕಾಯ್ದಿರಿಸಿ ಡಿಸಿ ಆದೇಶಿಸಿದ್ದಾರೆ.
ಗ್ರಾಪಂ ಪಿಡಿಒಗೆ ಜಮೀನು ಹಸ್ತಾಂತರಿಸಿ. ನರೇಗಾ ಇನ್ನಿತರ ಯೋಜನೆಗಳ ಅನುದಾನ ಬಳಸಿಕೊಂಡು ಅಭಿವೃದ್ಧಿಪಡಿಸಿ. ಆವರಣ ಗೋಡೆ ಅಥವಾ ತಂತಿಬೇಲಿ ನಿರ್ಮಿಸಿ. ಗಿಡ&ಮರಗಳನ್ನು ಬೆಳೆಸಬೇಕು. ಕುಡಿವ ನೀರು ಇನ್ನಿತರ ಸೌಲಭ್ಯ ಕಲ್ಪಿಸಿ. ಯಾವುದೇ ಅತಿಕ್ರಮಣ ಮಾಡದಂತೆ ಷರತ್ತು ವಿಧಿಸಿ ಪಹಣಿಯಲ್ಲಿ ನಮೂದಿಸಿದ್ದಾರೆ.