ಕೊಪ್ಪಳ: ಮಹಿಳೆ, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಕೇಂದ್ರ ಸರ್ಕಾರ ಸುಪೋಷಿತ್ ಯೋಜನೆ ಜಾರಿಗೊಳಿಸಿದೆ. ಗ್ರಾಮ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಹಮ್ಮಿಕೊಂಡಿದ್ದು ಜನರು ಸೌಲಭ್ಯ ಪಡೆಯುವಂತೆ ರಾಜ್ಯೋತ್ಸವ ಪುರಸತ ಕಲಾವಿದ ಶರಣಪ್ಪ ವಡಗೇರಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಿನ್ನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುಪೋಷಿತ್ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಮಹಿಳೆಯರು, ಮಕ್ಕಳಲ್ಲಿನ ಅಪೌಷ್ಟಿಕತೆಯಿಂದ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆರೋಗ್ಯವಂತ ಸಮಾಜ ನಿರ್ಮಾಣ ಕೇಂದ್ರದ ಗುರಿ. ಈ ನಿಟ್ಟಿನಲ್ಲಿ ಪೋಷಣ್ ಅಭಿಯಾನ ಮುಗಿದಿದ್ದು, ಸದ್ಯ ಸುಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಿಳೆ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕು. ಸಮತೋಲನ ತೂಕ ಹೊಂದಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿ ಗಾಪಂಗೆ ಯೋಜನೆಯಡಿ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕುಷ್ಟಗಿ ಜನಜಾಗೃತಿ ಕಲಾರಂಗ ಸಂಸ್ಥೆ ಕಲಾತಂಡದಿಂದ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲಕ್ಷಿ$್ಮದೇವಿರೆಡ್ಡಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಅಂಗನವಾಡಿಗಳ ಮೂಲಕ ಯೋಜನೆ ಜಾರಿ ಮಾಡಲಾಗುತ್ತಿದೆ. ಗರ್ಭಿಣಿ, ಐದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವವರು ತಮ್ಮ ತೂಕ ಮತ್ತು ಎತ್ತರ ಸಮತೋಲನ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಅಪೌಷ್ಟಿಕತೆಗೆ ಗುರಿಯಾಗತ್ತಾರೆ. ಅಂಥವರ ಬಗ್ಗೆ ವಿಶೇಷ ಆರೈಕೆ ಮೂಲಕ ಆರೋಗ್ಯ ಸುಧಾರಿಸುವುದು ಯೋಜನೆ ಉದ್ದೇಶ ಎಂದರು.
ಬೀದಿ ನಾಟಕ ಮೂಲಕ ಯೋಜನೆ ಅರಿವು ಮೂಡಿಸಲಾಯಿತು. ಗ್ರಾಪಂ ಸದಸ್ಯ ಮಂಜುನಾಥ ಎಸ್.ಹುದ್ದಾರ, ಅಂಗನವಾಡಿ ಕಾರ್ಯಕರ್ತೆಯರಾದ ಸಂತೋಷಿಮಾತಾ, ರೇಣುಕಾ ಜಾಲಿಹಾಳ, ಭಾರತಿ ವಾಲ್ಮೀಕಿ, ಗೀತಾಲಕ್ಷಿ$್ಮ ಚಿತ್ರಗಾರ, ಭಾಗಿರಥಿ ವಾಲ್ಮೀಕಿ, ರೇಣುಕಾ ಬಂಡಿ ಇದ್ದರು.