ಕೊಪ್ಪಳ: ಮಡಿವಾಳ ಮಾಚಿದೇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಾಚಿದೇವರು ಶಿವಶರಣರಲ್ಲಿ ಹಿರಿಯರು. ಬಸವಣ್ಣನವರ ಅನುಭವ ಮಂಟಪದಲ್ಲಿ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಸ್ವಾಗತಿಸುವ ಕೆಲಸ ಅವರದಾಗಿತ್ತು. ಅದ್ಭುತ ವಚನಗಳ ಮೂಲಕ ಮನಸ್ಸಿಗೆ ಅಂಟಿಕೊಂಡಿರುವ ಕೊಳೆ ತೊಳೆವ ಕಾಯಕ ಮಾಡಿದರು. ಅವರು ರಚಿಸಿರುವ ವಚನಗಳಲ್ಲಿ 300 ವಚನಗಳು ದೊರಕಿವೆ. ಮಡಿವಾಳ ಸಮುದಾಯದವರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಮಾಚಿ ದೇವರ ಆಶಯ ನಮಗೆಲ್ಲ ಮಾದರಿಯಾಗಲಿ ಎಂದರು.
ಚಿತ್ರದುರ್ಗ ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ.ಬಸವ ಮಾಚಿದೇವ ಸ್ವಾಮಿಜಿ ಮಾತನಾಡಿ, ಮಾಚಿ ದೇವರು ಕಾಯಕ ಮತ್ತು ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದವರು. ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ತಿಳಿಸಬೇಕು. ಅವರು ತಮ್ಮ ಕಾಯಕ ಮತ್ತು ವಚನಗಳ ಮೂಲಕ ಸಮಸ್ತ ಮಾನವ ಕುಲಕ್ಕೆ ಆದರ್ಶವಾಗಿದ್ದಾರೆ. ಮೆರವಣಿಗೆಯಲ್ಲಿ ಮುಸ್ಲಿಮ್ ಸಮುದಾಯ ಯುವಕರು, ಕುಂಬ ಹೊತ್ತ ಹೆಣ್ಣು ಮಕ್ಕಳಿಗೆ ನೀರು ಮತ್ತು ಮಜ್ಜಿಗೆ ಕೊಡುವ ಮೂಲಕ ಭಾವೈಕ್ಯತೆಗೆ ಸಾಯಾದರು ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಬಿ. ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಶ ಪಲ್ಟನ್, ಸದಸ್ಯರಾದ ಅಜೀಮುದ್ದಿನ್ ಅತ್ತಾರ್, ಅರುಣ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಉದ್ಯಮಿ ಸೋಮಶೇಖರ್ ಹಿಟ್ನಾಳ್, ಸಲಿಮ್ ಅಳವಂಡಿ ಹಾಗೂ ಮಡಿವಾಳ ಸಮುದಾಯದ ಪ್ರಮುಖರಾದ ಕೃಷ್ಣ ಎಸ್.ಮಡಿವಾಳ, ಎಂ.ಕೆ.ಹನುಮಂತಪ್ಪ, ಶಂಕ್ರಪ್ಪ ಹಾಲ್ಕೆರಿ, ರಾಮಣ್ಣ ಮಡಿವಾಳರ, ಬಸವರಾಜ ಬೆಳಗಲಿ, ದುರಗೇಶ ಮಡಿವಾಳರ ಇತರರಿದ್ದರು.