ಜಿಲ್ಲೆ

ಕೊಪ್ಪಳದಲ್ಲಿ ಲೋಕಾ ದಾಳಿ

ಕೊಪ್ಪಳ: ನಗರದ ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್​.ಎಂ.ಚೌವ್ಹಾಣ್​ ನಿವಾಸ ಹಾಗೂ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಕೊಪ್ಪಳದ ನಗರಸಭೆ ಮುಂಭಾಗದ ಕೈಗಾರಿಕೆ ಕಚೇರಿ, ಅಭಿಷೇಕ ನಗರದ ಮನೆ ಹಾಗೂ ಭಾಗ್ಯನಗರ ಪಟ್ಟಣದ ಕೀರ್ತಿ ನಗರದ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿದ ಅಧಿಕಾರಿಗಳು ರಾತ್ರಿವರೆಗೂ ದಾಖಲೆ ಪರಿಶೀಲಿಸಿದರು. ಚಿನ್ನಾಭರಣ, ಬ್ಯಾಂಕ್​ ಖಾತೆಗಳು, ವಿವಿಧೆಡೆ ಹೊಂದಿದ ಆಸ್ತಿ ದಾಖಲೆ ಪತ್ರಗಳನ್ನು ಕಲೆ ಹಾಕಿದರು. ಹುಬ್ಬಳ್ಳಿ ನಿವಾಸದ ಮೇಲೂ ದಾಳಿಯಾಗಿದ್ದು, ತಡರಾತ್ರಿವರೆಗೂ ಪರಿಶೀಲನೆ ಮುಂದುವರೆದಿದೆ. ಕಳೆದೆರಡು ದಶಕದಿಂದ ಕೊಪ್ಪಳದಲ್ಲಿ ಅಧಿಕಾರಿಯಾಗಿರುವ ಚೌವ್ಹಾಣ್​ ಇಲ್ಲಿಯೇ ಮುಂದುವರೆದಿದ್ದಾರೆ. ನಗದು, ಅಪಾರ ಚಿನ್ನಾಭರಣಮ, ಬೇನಾಮಿ ಆಸ್ತಿ ಹೊಂದಿದ ದಾಖಲೆ ಪತ್ತೆಯಾಗಿವೆ ಎನ್ನಲಾಗಿದೆ.