ಕೊಪ್ಪಳ: ನಗರದ ಸಾರಿಗೆ ಇಲಾಖೆ ಕಚೇರಿಗೆ ಲೋಕಾಯುಕ್ತ ಡಿಎಸ್ಪಿ ವಸಂತಕುಮಾರ್, ಪಿಐ ಸುನಿಲ್ ಮೇಗಳಮನಿ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ವಾಹನ ನೋಂದಣಿ ಸರಿಯಾಗಿ ಮಾಡುವುದಿಲ್ಲ. ಏಜೆಂಟ್ಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಶುಲ್ಕದ ಜತೆಗೆ ಸಾವಿರಾರು ರೂ. ಲಂಚ ಕೇಳುತ್ತಾರೆ. ಯಾವುದೇ ಸೇವೆ ನೇರವಾಗಿ ಜನರಿಗೆ ಸಿಗುವುದಿಲ್ಲ. ಏಜೆಂಟ್ಗಳ ಮೂಲಕ ತೆರಳಿದರೆ ಮಾತ್ರ ಸೇವೆ ನೀಡುತ್ತಾರೆ. ಅಧಿಕಾರಿಗಳು ಯಾರು, ಏಜೆಂಟ್ಗಳು ಯಾರು ಎಂಬುದೇ ಗೊತ್ತಾಗುವುದಿಲ್ಲ. ಒಂದು ಸೇವೆ ಪಡೆಯಬೇಕೆಂದರೆ ಹತ್ತಾರು ಬಾರಿ ಅಲೆದಾಡಬೇಕೆಂದು ಜನರು ದೂರಿದರು.
ದೂರುಗಳು ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಚೇರಿಗೆ ಬಂದ ಲೋಕಾಯುಕ್ತ ಪೊಲೀಸರು ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ವಾಹನ ಚಾಲನಾ ಪರವಾನಗಿ, ವಾಹನ ನೋಂದಣಿ ಕಾರ್ಡ್ಗಳನ್ನು ವಿತರಿಸದೇ ಡಬ್ಬಾದಲ್ಲಿ ಹಾಕಿ ಇಟ್ಟಿದ್ದನ್ನು ಗಮನಿಸಿದರು. ಯಾಕೆ ವಿತರಿಸಿಲ್ಲ ಎಂದು ಪ್ರಶ್ನಿಸಿದರು. ಸಾರಿಗೆ ಅಧಿಕಾರಿಗಳು ಸಬೂಬು ಹೇಳಿದರು. ಇದಕ್ಕೆ ಗರಂ ಆದ ಲೋಕಾಯುಕ್ತರು ತರಾಟೆ ತೆಗೆದುಕೊಂಡರು. ಸರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿರುವಂತೆ ತಿಳಿಸಿದರು.
ಜನರಿಂದ ದೂರು ಹೆಚ್ಚುತ್ತಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಅರ್ಜಿ ಸಲ್ಲಿಕೆ ಅವಧಿ, ಸೇವೆ ನೀಡಿದ ದಿನಾಂಕ ಗಮನಿಸಿದರು. ಎಲ್ಲ ದಾಖಲೆಗಳನ್ನು ವೀಸಿದ್ದು ಸೇವೆ ನೀಡುವಲ್ಲಿ ಲೋಪವಾಗಿದ್ದನ್ನು ಅರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.