ಜಿಲ್ಲೆ

ರಾಷ್ಟ್ರೀಯ ಲೋಕ ಅದಾಲತ್​ 14ರಂದು

ಕೊಪ್ಪಳ: ಜಿಲ್ಲಾದ್ಯಂತ ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್​ ಹಮ್ಮಿಕೊಳ್ಳಲಾಗಿದೆ. ರಾಜೀ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಸದುಪಯೋಗಪಡೆಯಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ತಿಳಿಸಿದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಯಾವುದೇ ಖರ್ಚಿಲ್ಲದೇ ಶ್ರೀ ತೀರ್ಮಾನಕ್ಕೆ ಅದಾಲತ್​ ಸುವರ್ಣ ಅವಕಾಶ. ದಾವೆದಾರರು, ಕದಾರರು ಅದಾಲತ್​ನಲ್ಲಿ ಭಾಗಿಯಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಬ್ಬರಿಗೂ ಒಪ್ಪಿಗೆ ಆಗುವಂತೆ ತೀರ್ಮಾನ ಆಗುವುದರಿಂದ ಭಾಂದವ್ಯ ಉಳಿಯಲಿದೆ. ಇಬ್ಬರಿಗೂ ಸೋಲಿರುವುದಿಲ್ಲ. ರಾಜೀ ಸಂಧಾನ ಮಾಡಿಕೊಂಡಲ್ಲಿ ಸಿವಿಲ್​ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ಮರುಪಾವತಿ ಮಾಡಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆ ಆದರೆ ಮಾತ್ರ ರಾಜೀ ಮಾಡಿಕೊಳ್ಳಬಹುದು. ಹಿಂದಿನ ಅದಾಲತ್​ನಲ್ಲಿ 3,328 ಪ್ರಕರಣ ಪರಿಹರಿಸಿದ್ದು, 55.38 ಕೋಟಿ ರೂ. ವಸೂಲಾಗಿದೆ. ಅದಾಲತ್​ನಿಂದ ನ್ಯಾಯಾಲಯದಲ್ಲಿ ಪ್ರಕರಣಗಳ ಒತ್ತಡವೂ ಕಡಿಮೆ ಆಗಲಿದೆ. ಈ ಬಾರಿ ಅದಾಲತ್​ನಲ್ಲಿ ಅತಿಹೆಚ್ಚು ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಹೊಂದಿರುವುದಾಗಿ ತಿಳಿಸಿದರು. ಜಿಲ್ಲಾ ವಾರ್ತಾಧಿಕಾರಿ ಸುರೇಶ್​ ಜಿ. ಇದ್ದರು.