ಕೊಪ್ಪಳ ತಾಲೂಕಿನ ಭಾಗ್ಯನಗದಲ್ಲಿ ಕಾರ್ಮಿಕ ಸಂಟನೆಗಳು ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಹೋರಾಟಗಾರ ಬಸವರಾಜ ಶೀಲವಂತರ ಮಾತನಾಡಿದರು. ಸಂಚಾಲಕರಾದ ಎಸ್​.ಎ.ಗಾರ, ಮೌಲಾಸಾಬ್​ ಕಪಾಲಿ ಇದ್ದರು. 
ಜಿಲ್ಲೆ

ಕಾರ್ಮಿಕ ವಿರೋಧಿಗಳನ್ನು ಮಟ್ಟ ಹಾಕಬೇಕು:ಶೀಲವಂತರ

ಕೊಪ್ಪಳ: ಕಾರ್ಮಿಕ ವಿರೋಧಿ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿವೆ. ಅವುಗಳನ್ನು ನಮ್ಮ ಹೋರಾಟ ಮೂಲಕ ಮಟ್ಟ ಹಾಕಬೇಕಿದೆ ಎಂದು ಹೋರಾಟಗಾರ ಬಸವರಾಜ ಶೀಲವಂತರ ಹೇಳಿದರು.

ತಾಲೂಕಿನ ಭಾಗ್ಯನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕ ಸಂಟನೆ ಕಟ್ಟಲು ಅನೇಕರು ಶ್ರಮವಹಿಸಿದ್ದಾರೆ. ಕಾರ್ಮಿಕರ ಬದುಕು ಕಟ್ಟಿಕೊಟ್ಟಿದ್ದಾರೆ. ಇಂದು ಕಾರ್ಮಿಕ ವಿರೋಧಿ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಕಾರ್ಮಿಕ ಹಕ್ಕು, ಕಾನೂನು ನಾಶ ಮಾಡುವ ಯತ್ನಗಳು ನಡೆದಿವೆ. ಇದನ್ನು ತಡೆಯಲು ಜನ ವಿರೋಧಿ ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡಬೇಕು. ಲೋಕಸಭೆ ಚುನಾವಣೆಯಲ್ಲೂ ಎಚ್ಚರಿಕೆಯಿಂದ ಮತದಾನ ಮಾಡಿ. ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು. ಅವರು ಸಂವಿಧಾನ ವಿರೋಧಿಗಳು ಎಂದರು.

ಸಂಚಾಲಕ ಎಸ್​.ಎ.ಗಾರ ಮಾತನಾಡಿ, ಕಾರ್ಮಿಕರ ಸ್ಥಿತಿ ಶೋಚನೀಯವಿದ್ದಾಗ ಮಾರ್ಕ್ಸ್​, ಲೆನಿನ್​ನಂಥವರು ಹೋರಾಟ ಕಟ್ಟಿದರು. ಬಂಡವಾಳ ಶಾಹಿಗಳ ವಿರುದ್ಧ ಹೋರಾಟಕ್ಕೆ ಕರೆಕೊಟ್ಟರು. ಚಿಕಾಗೋದಲ್ಲಿ ಬಹುದೊಡ್ಡ ಹೋರಾಟ ನಡೆಸಿದರು. ಅಧಿಕಾರಸ್ಥರು ನಡೆಸಿದ ಅಪಾಯಕಾರಿ ದಾಳಿಗಳಿಗೆ ಒಳಗಾಗಿ ಕಾರ್ಮಿಕರು ರಕ್ತಸಿಕ್ತಗೊಂಡರು. ಅವರ ನೆತ್ತರಲ್ಲಿ ತೊಯ್ದು ಎತ್ತಿ ಹಿಡಿದದ್ದು ಕೆಂಪು ಧ್ವಜದ ಸಂಕೇತ ಎಂದರು.

ಮೌಲಾ ಸಾಬ್​ ಕಪಾಲಿ ಮಾತನಾಡಿದರು. ಪ್ರಮುಖರಾದ ಗೈಬು ಸಾಬ್​ ಮಾಳೆಕೊಪ್ಪ, ಜಗದೀಶ್​ ಕಟ್ಟಿಮನಿ, ಹನುಮಂತ ವಡ್ಡರ್​, ರಾಮಣ್ಣ ಗುಡಿ, ರಾಘು, ಅನಿಲ್​ ಬಾಚಾ ಇತರರಿದ್ದರು.