ಕೊಪ್ಪಳ: ಕಾರ್ಮಿಕರಿಗಾಗಿ ಮೀಸಲಿರುವ ಹಣದ ದುರುಪಯೋಗ ತಡೆಯುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವವರ ಸಂದ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
1996ರ ಕಟ್ಟಡ ನಿಮಾರ್ಣ ಕಾರ್ಮಿಕರ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಾರ್ಮಿಕರ ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಲಾಗುತ್ತಿದೆ. ಕಾರ್ಮಿಕರ ಯೋಜನೆಗಳು ಸರಿಯಾಗಿ ಅರ್ಹರಿಗೆ ತಲುಪುತ್ತಿಲ್ಲ. ಕೆಲ ಯೋಜನೆಗಳಲ್ಲಿ ಅವೈಜ್ಞಾನಿಕ ವಿಧಾನ ಅಳವಡಿಸಲಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರ ಹ ಅನ್ಯ ಯೋಜನೆಗಳಿಗೆ ಬಳಸಬಾರದು. ಸೆಸ್ ಮೊತ್ತ ಶೇ.2ಕ್ಕೆ ಹೆಚ್ಚಿಸಬೇಕು. ಹೆಚ್ಚಿಸಿದ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಬೇಕು. ಖಾಸಗಿ, ವಾಣಿಜ್ಯ ಸೆಸ್ ಸಂಗ್ರಹ ಮಿತಿ ಹೆಚ್ಚಿಸಬಾರದು. ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು. ಕಾರ್ಮಿಕ ಅಧಿಕಾರಿಗಳು ಮುತವರ್ಜಿ ವಹಿಸಿ ಸೆಸ್ ಮೊತ್ತ ಸಂಗ್ರಹಿಸಬೇಕು. ಕಾರ್ಮಿಕರ ಪಿಂಚಣಿ ಮೊತ್ತ 6ಸಾವಿರ ರೂ.ಕ್ಕೆ ಹೆಚ್ಚಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಯೋಜನೆ ಮೊದಲಿಂತೆ ಮುಂದುವರಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಸಂಘದ ಸಂಚಾಲಕರಾದ ಎಸ್.ಎ.ಗಫಾರ್, ತುಕಾರಾಮ್ ಪಾತ್ರೋಟಿ, ನೂರ್ ಸಾಬ್ ಹೊಸಮನಿ, ಮೌಲಾ ಹುಸೇನ್ ಹಣಗಿ, ಜಾಫರ್ ಕುರಿ, ಮೌಲಾ ಸಾಬ್ ಕಪಾಲಿ, ಗೈಬು ಸಾಬ್ ಮಾಳೆಕೊಪ್ಪ, ಶ್ರೀದೇವಿ ಹೆಬ್ಬಾಳ. ರೇಣವ್ವ ಎಂ. ಇತರರಿದ್ದರು.