ಜಿಲ್ಲೆ

ಪ್ರಶಸ್ತಿ ಪ್ರದಾನ ಸಮಾರಂಭ ಮಾ.9ಕ್ಕೆ

Kopala - Raveendra V K

ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದಿಂದ ಮಾ.9ರಂದು ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಎಲ್ಲ ಪತ್ರಕರ್ತರು, ಸಾರ್ವಜನಿಕರು ಭಾಗಿಯಾಗಿ ಯಶಸ್ವಿಗೊಳಿಸುವಂತೆ ಸಂದ ರಾಜ್ಯ ಸಮಿತಿ ಸದಸ್ಯ ಸಾದಿಕ್​ ಅಲಿ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಸಂದ ವಾರ್ಷಿಕ ಸರ್ವ ಸದಸ್ಯರ ಸಭೆ ಹಮ್ಮಿಕೊಂಡಿದ್ದೇವೆ. ಜತೆಗೆ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯಾದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಲಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆಹಾರ, ಪ್ರಚಾರ, ಸಾರಿಗೆ, ವೇದಿಕೆ ಸೇರಿ ವಿವಿಧ ಸಮಿತಿ ರಚಿಸಿಕೊಂಡಿದ್ದು ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದರು.

ಸಂದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಮಾತನಾಡಿ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನಿರ್ದೇಶನದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಠಾರೆ, ಪಾನಂಟಿ ಕಲ್ಯಾಣ ಮಂಟಪದಲ್ಲಿ ಸಭೆ, ಊಟ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬಂದ ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನೂ ಮಾಡಿದ್ದೇವೆ. ಎಲ್ಲ ಪತ್ರಕರ್ತರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸಂದ ಪ್ರಧಾನ ಕಾರ್ಯದರ್ಶಿ ನಾಗರಾಜ ವೈ., ಖಜಾಂಚಿ ರಾಜು ಬಿ.ಆರ್​. ಇದ್ದರು.