ವಿಜಯವಾಣಿ ವಿಶೇಷ ಕೊಪ್ಪಳ
ನಗರದ ವೈದ್ಯಕಿಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸೇವೆಗಳು ಹೆಚ್ಚುತ್ತಿದ್ದು, ಕೊಪ್ಪಳ ಸೇರಿ ಅಕ್ಕ&ಪಕ್ಕದ 7&8 ಜಿಲ್ಲೆ ಜನರು ಸೇವೆ ಪಡೆಯುತ್ತಿದ್ದಾರೆ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಘೋಷಣೆಯಾಗುತ್ತಲೇ ತಜ್ಞ ವೈದ್ಯರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿ ತಂತ್ರಜ್ಞರು, ಶುಶ್ರೂಷಕ ಸಿಬ್ಬಂದಿ ಅಗತ್ಯವಿದ್ದು, ಕಿಮ್ಸ್ಗೆ ಅಲೈಡ್ ಹೆಲ್ತ್ ಸೈನ್ಸ್ಸ್ ಕೋರ್ಸ್ ನೀಡಲು ಸರ್ಕಾರ ಮುಂದಾಗಿದೆ.
2013-14ನೇ ಸಾಲಿನಲ್ಲಿ ಕಿಮ್ಸ್ ಆರಂಭವಾಗಿದೆ. ದಶಕ ಕಳೆದಿದ್ದು ಪ್ರತಿ ವರ್ಷ 150 ಎಂಬಿಬಿಎಸ್ ಪದವಿಧರರು ಹೊರಬರುತ್ತಿದ್ದಾರೆ. ವಿವಿಧ 14 ವಿಭಾಗಗಳಲ್ಲಿ ಸ್ನಾತಕೋತ್ತರ (ಪಿಜಿ) ಕೋರ್ಸ್ಗಳು ಆರಂಭವಾಗಿವೆ. ಈ ವರ್ಷದ ಬಜೆಟ್ನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಘೋಷಣೆಯಾಗಿದ್ದು, ವೈದ್ಯರಿಗೆ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ದೊರೆಯಲಿದೆ. ಜತೆಗೆ ಜಿಲ್ಲೆ ಸೇರಿ ನೆರೆ ಜಿಲ್ಲೆಗಳ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿದೆ. 450 ಹಾಸಿಗೆಗಳ ಹೊಸ ಪ್ರತ್ಯೇಕ ಆಸ್ಪತ್ರೆ ನಿರ್ಮಾಣವಾಗಿದ್ದು ಉದ್ಘಾಟನೆಗೊಂಡಲ್ಲಿ ಮತ್ತಷ್ಟೂ ಅನುಕೂಲವಾಗಲಿದೆ. ಬೋಧನಾ ವಿಭಾಗದಲ್ಲಿ ಎಂಬಿಬಿಎಸ್, ಪಿಜಿ ಕೋರ್ಸ್ಗಳ ಜತೆಗೆ ಬಿಎಸ್ಸಿ ನರ್ಸಿಂಗ್ ಕೋರ್ಸ್ಗಳು ಕಿಮ್ಸ್ ನೀಡುತ್ತಿದೆ.
ಕೆಲ ವರ್ಷದಿಂದ ಸಾಮಾನ್ಯ ಕೋರ್ಸ್ಗಳು ಆರಂಭವಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಸ್ಥಳಿಯವಾಗಿ ತಾಂತ್ರಿಕ ಶಿಕ್ಷಣ ಲಭ್ಯವಾಗುತ್ತಿದೆ. ಪಿಜಿ ಕೋರ್ಸ್ಗಳ ಆರಂಭ ಮುಂದೆ ಸೂಪರ್ ಸ್ಪೇಷಾಲಿಟಿ ಸೇವೆಗಳನ್ನು ಒದಗಿಸಬೇಕಿರುವುದರಿಂದ ಈಗಿರುವ ಬೋಧಕ, ಬೋಧಕೇತರ, ತಂತ್ರಜ್ಞರು ಹಾಗೂ ಒತರ ಸಿಬ್ಬಂದಿ ಹೆಚ್ಚಿಸುವ ಅಗತ್ಯವಿದೆ. ಮುಖ್ಯವಾಗಿ ವಿವಿಧ ವಿಭಾಗಗಳಲ್ಲಿ ಶುಶ್ರೂಷಕರು, ಪ್ರಯೋಗಾಲು ತಂತ್ರಜ್ಞರು, ಪರಿಣತರ ಅವಶ್ಯ ಹಿಂದಿಗಿಂತ ಈಗ ಹೆಚ್ಚಾಗುತ್ತಿದೆ. ಹೊರ ಜಿಲ್ಲೆಯಿಂದ ಬರುವವರ ಸಂಖ್ಯೆ ಕಡಿಮೆ ಇದೆ. ಕೊಪ್ಪಳ ಸೇರಿ ಅಕ್ಕ&ಪಕ್ಕದ ಜಿಲ್ಲೆಗಳಲ್ಲಿ ವಿಶೇಷ ಕೋರ್ಸ್ಗಳ ಲಭ್ಯತೆ ಕಡಿಮೆ ಇರುವ ಕಾರಣ ಹುದ್ದೆಗಳಿಗೆ ತಕ್ಕಷ್ಟು ಅರ್ಹತೆಯುಳ್ಳವರ ಲಭ್ಯವಾಗುತ್ತಿಲ್ಲ.
ಸ್ಥಳಿಯವಾಗಿಯೇ ಕೋರ್ಸ್ಗಳನ್ನು ಆರಂಭಿಸಿದಲ್ಲಿ ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿದೆ. ಜತೆಗೆ ಸ್ಥಳಿಯವಾಗಿಯೇ ಉದ್ಯೋಗವಕಾಶ ದೊರೆಯಲಿದೆ. ಈ ನಿಟ್ಟಿನಲ್ಲಿ ಕೊಪ್ಪಳ ವೈದ್ಯಕಿಯ ವಿಜ್ಞಾನ ಸಂಸ್ಥೆಗೆ ಬಿಎಸ್ಸಿಯಲ್ಲಿ ಹೆಚ್ಚುವರಿ ವಿಶೇಷ ಕೋರ್ಸ್ಗಳನ್ನು ಆರಂಭಿಸಲು ಅನುಮತಿ ಕೋರಿ ನಿರ್ದೇಶಕರು ರಾಜೀವ್ಗಾಂಧಿ ವೈದ್ಯಕಿಯ ವಿಜ್ಞಾನ ವಿವಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಿವಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಇತ್ತೀಚೆಗೆ ತಜ್ಞರ ತಂಡ ಕಿಮ್ಸ್ಗೆ ಭೇಟಿ ನೀಡಿ ಸೌಲಭ್ಯಗಳ ಲಭ್ಯತೆ ಪರಿಶೀಲಿಸಿ ತೆರಳಿದೆ. ಮೌಖಿಕ ಭರವಸೆ ದೊರೆತಿದ್ದು, ಅಧಿಕೃತ ಆದೇಶವಾದಲ್ಲಿ ಹೆಚ್ಚುವರಿ ಕೋರ್ಸ್ಗಳನ್ನು ಆರಂಭಿಸಲು ಅನುಮೋದನೆ ದೊರೆಯಲಿದೆ.
ಹೊಸ ಕೋರ್ಸ್ಗಳ ನಿರೀೆ
ಬಿಎಸ್ಸಿಯಲ್ಲಿ ಈಗಾಗಲೇ ನರ್ಸಿಂಗ್ ಕೋರ್ಸ್ ಆರಂಭಿಸಲಾಗಿದೆ. ಅಲೈಡ್ ಹೆಲ್ತ್ ಸೈನ್ಸ್ಸ್ ವಿಭಾಗದಲ್ಲಿ ಹೊಸದಾಗಿ 7 ಕೋರ್ಸ್ಗಳನ್ನು ಆರಂಭಿಸಲು ಕಿಮ್ಸ್ ಅನುಮತಿ ಕೋರಿದೆ. ಜೂ.13ರಂದು ಕೊಪ್ಪಳಕ್ಕೆ ಭೇಟಿ ನೀಡಿದ ವಿವಿ ತಂಡ ಆಸ್ಪತ್ರೆ, ಕಿಮ್ಸ್ ಕಟ್ಟಡ ಹಾಗೂ ಬೋಧನಾ ಸಿಬ್ಬಂದಿ, ಪ್ರಯೋಗಾಲಯ ಒಳಗೊಂಡ ಇತರ ಸೌಕರ್ಯಗಳ ಲಭ್ಯತೆ ಪರಿಶೀಲಿಸಿದೆ. ಮುಖ್ಯವಾಗಿ ಡಯಾಲಿಸಿಸ್, ಕಾರ್ಡಿಯಾಲಜಿ, ವಿಕಿರಣಶಾಸ್ತ್ರ, ಶಸ್ತ್ರಚಿಕಿತ್ಸೆ, ರೆಸ್ಪರೇಟರಿ, ಆಪ್ಟೊಮೆಟ್ರಿ ಕೋರ್ಸ್ಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನಾ ತಂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆರಂಭಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಅಧಿಕೃತವಾಗಿ ಆದೇಶ ಬಂದಲ್ಲಿ ಹೆಚ್ಚುವರಿ 80 ಸೀಟುಗಳು ಲಭ್ಯವಾಗಲಿದ್ದು ನರ್ಸಿಂಗ್ ವಿದ್ಯಾರ್ಥಿಗಳಿಗೆ ವರವಾಗಲಿದೆ.