ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಕಾರ್ಖಾನೆ ವಿಸ್ತರಣೆಗೆ ಅನುಮತಿ ನೀಡದಂತೆ ಒತ್ತಾಯಿಸಿ ಕರವೇ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಡಿಸಿ ನಲಿನ್ ಅತುಲ್ ಮನವಿ ಸಲ್ಲಿಸಿದರು.
ಕೊಪ್ಪಳದಿಂದ ಕೂಗಳತೆ ದೂರದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿದ್ದು, ಈಗಲೇ ಧೂಳು ಹೆಚ್ಚಿದೆ. ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಬಿಎಸ್ಪಿಎಲ್ ದೊಡ್ಡ ಕಾರ್ಖಾನೆ ನಿರ್ಮಿಸುವುದಾಗಿ ಹೇಳಿದೆ. ಇದರಿಂದ ಮತ್ತಷ್ಟು ಮಾಲಿನ್ಯ ಹೆಚ್ಚಲಿದೆ. ವಿಶೇಷವಾಗಿ ಜನರ ಆರೋಗ್ಯ ಮತ್ತಷ್ಟು ಬಿಗಡಾಯಿಸುವುದು. ರೈತರ ಬೆಳೆಗೆ ಸಂಕಷ್ಟ ಎದುರಾಗುವುದು. ಇದೆಲ್ಲವನ್ನು ಗಮನಿಸದೇ ಕಂಪನಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಲು ಮುಂದಾಗಿರುವುದು ಸರಿಯಲ್ಲವೆಂದು ಕಿಡಿ ಕಾರಿದರು.
ಸರ್ಕಾರ ಯಾವುದೇ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಜನರ ಆರೋಗ್ಯ ಹಾಗೂ ಕೃಷಿ ಬೆಳೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಾಣಿ, ಪಗಳು ಹಾಗೂ ಸುತ್ತಲ ಪರಿಸರ ಕಾಳಜಿವಹಿಸಬೇಕು. ಇಲ್ಲದಿದ್ದರೆ ಮುಂದೆ ಕೊಪ್ಪಳ ನಗರ ಸ್ಥಳಾಂತರಿಸುವ ಸ್ಥಿತಿ ಬರಲಿದೆ. ತಕ್ಷಣ ಈ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ ಜ್ಞಾನಸುಂದರ, ಸಂಚಾಲಕರಾದ ನಿಂಗಪ್ಪ ಮೂಗಿನ್, ರಮೇಶ ಚಂಡೂರು, ವಿರೇಶ ಮುಂಡಾಸದ, ಕುಮಾರಸ್ವಾಮಿ ನಾಗರಳ್ಳಿ, ಸಂಜೀವಸಿಂಗ್ ಹಜಾರೆ, ಪರಮೇಶ್ವರಪ್ಪ ಉಪ್ಪಿನ್, ವೆಂಕಟೇಶ ತಟ್ಟಿ, ಮಂಜುನಾಥ ಗೊಂಬಿ ಇತರರಿದ್ದರು.