ಕೊಪ್ಪಳದಲ್ಲಿ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಗುರುವಾರ ಕನಕಗಿರಿ ಉತ್ಸವ ಅಂಗವಾಗಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜಿನ ತೊದಲಬಾಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಇದ್ದರು. 
ಜಿಲ್ಲೆ

ಕಾಲಮಿತಿಯಲ್ಲಿ ಉತ್ಸವ ತಯಾರಿ ಮುಗಿಸಿ, ಅಧಿಕಾರಿಗಳಿಗೆ ಡಿಸಿ ನಲಿನ್​ ಅತುಲ್​ ಸೂಚನೆ

ಕೊಪ್ಪಳ: ಕನಕಗಿರಿ ಉತ್ಸವ ಸಂಬಂಧ ಎಲ್ಲ ಸಮಿತಿಗಳಿಗೆ ವಹಿಸಿ ಜವಾಬ್ದಾರಿಯನ್ನು ಅವಧಿಯೊಳಗೆ ಮುಗಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಉತ್ಸವ ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ವ್ಯವಸ್ಥಿತವಾಗಿ ನಡೆಸಲು ರಚಿಸಿದ ಸಮಿತಿಗಳು ನಿಮ್ಮ ಕರ್ತವ್ಯ ಜವಾಬ್ದಾರಿಯಿಂದ ನಿಭಾಯಿಸಿ. ಹಬ್ಬದ ವಾತಾವರಣ ನಿರ್ಮಿಸಿ. ಕನಕಗಿರಿಯಲ್ಲಿ ಸರ್ಕಾರಿ ಕಟ್ಟಡಗಳು, ಗ್ರಂಥಾಲಯ, ಶಾಲಾ ಕಟ್ಟಡಗಳು ಮತ್ತು ಉತ್ಸವದ ಮೆರವಣಿಗೆ ಸಾಗಿ ಬರುವ ರಸ್ತೆ ಹಾಗೂ ಪ್ರಮುಖ ವೃತ್ತಗಳು ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸಬೇಕು. ಇದಕ್ಕೆ ಕ್ರಮ ಕೈಗೊಳ್ಳಿ.

ಮೆರವಣಿಗೆ, ವಿವಿಧ ಸಾಂಸತಿಕ ಕಾರ್ಯಕ್ರಮಗಳು, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸೈಕಲ್​ ಜಾಥಾ, ಮ್ಯಾರಾಥಾನ್​, ದೇಸಿ ಕ್ರೀಡೆಗಳು, ಸ್ಥಳಿಯ ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ನಿರ್ದೇಶಿಸಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಸಾರಿಗೆ ಸಮಸ್ಯೆ ಆಗದಿರಲಿ. ಆಗಮಿಸುವ ಗಣ್ಯರು, ಕಲಾವಿದರಿಗೆ ವಸತಿ, ಕುಡಿವ ನೀರು, ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರಲಿ. ಉತ್ಸವ ಯಶಸ್ಸಿಗಾಗಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್​ ಮಾತನಾಡಿ, ಉತ್ಸವ ಅಂಗವಾಗಿ ಕುಸ್ತಿ, ಹಗ್ಗ ಜಗ್ಗಾಟ, ಕಬಡ್ಡಿ ಹಾಗೂ ಗ್ರಾಮೀಣ ಕ್ರೀಡೆಗಳು ವಾಲಿಬಾಲ್​ ಪಂದ್ಯಾವಳಿ ಇರಲಿವೆ. ಚೆನೈ ವಾಲಿಬಾಲ್​ ತಂಡ ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜಿನ ತೊದಲಬಾಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಇತರರಿದ್ದರು.