ಜಿಲ್ಲೆ

ಕೊಪ್ಪಳದಲ್ಲಿ 78ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ

ಕೊಪ್ಪಳ: ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವಾದ ಹೈಕ ವಿಮೋಚನಾ‌ ದಿನ ಅಂಗವಾಗಿ ಆಚರಿಸುವ 78ನೇ ಕಲ್ಯಾಣ ಕರ್ನಾಟಕ ಉತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿ, ಹೈದ್ರಾಬಾದ್ ನಿಜಾಮರಿಂದ ಸ್ವಾತಂತ್ರ್ಯ ಪಡೆದ ಈ ದಿನ ನಮಗೆಲ್ಲ ಮಹತ್ವದ ದಿನ. ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಮಗೆಲ್ಲ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ರಜಾಕರ ನಾಯಕ ಖಾಸಿಂ ರಜ್ವಿ ನೇತೃತ್ವದಲ್ಲಿ ನಮ್ಮ ಮೇಲೆ ದಾಳಿ ಮುಂದುವರಿದವು. ಸ್ವಾಮಿ ರಮಾನಂದ‌ ತೀರ್ಥರು ಹೈಕ ವಿಮೋಚನಾ ಆಂದೋಲನ ಆರಂಭಿಸಿದರು. ಅನೇಕರ ತ್ಯಾಗ-ಬಲಿದಾನದಿಂದ ನಮಗೆಲ್ಲ ಸ್ವಾತಂತ್ರ್ಯ ಸಿಕ್ಕಿತು. ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಬಭಾಯ್ ಪಟೇಲ್ ಅವರು ಸೇನಾ ಕಾರ್ಯಾಚರಣೆ ನಡೆಸಿ ನಿಜಾಮರನ್ನು ಸದೆಬಡಿದರು ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. 15 ತುಕಡಿಗಳ ಶಿಸ್ತಿನ ಪರೇಡ್ ನೆರೆದವರ ಗಮನ ಸೆಳೆಯಿತು. ಸಚಿವ ತಂಗಡಗಿ ಪರೇಡ್ ವಂದನೆ ಸ್ವೀಕರಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ‌ ಶ್ರೀನಿವಾಸ ಗುಪ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಅಪರ‌ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಇತತರು ಭಾಗಿಯಾಗಿದ್ದರು.