ಕೊಪ್ಪಳ: ಲೋಕ ಅದಾಲತ್ ಹೊರತುಪಡಿಸಿ ಮಧ್ಯಸ್ಥಿಕೆ ವಿಶೇಷ ಆಂದೋಲನ ಹಮ್ಮಿಕೊಂಡಿದ್ದು ಜು.1ರಿಂದ ಸೆಪ್ಟಂಬರ್ ಮಾಸಾಂತ್ಯದವರೆಗೆ ಇರಲಿದೆ. ರಾಜೀ ಆಗಬಹುದಾದ ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ಅವಕಾಶವಿದ್ದು ಸಾರ್ವಜನಿಕರು ಸದುಪಯೋಗ ಪಡೆಯುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ದಾಖಲಾದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು. ಲೋಕ ಅದಾಲತ್ನಲ್ಲಿ ಕೇವಲ ಒಂದು ದಿನ ಅವಕಾಶವಿದೆ. ಇಲ್ಲಿ 90 ದಿನ ನಿರಂತರ ಅವಕಾಶ ಮಾಡಿಕೊಡಲಾಗಿದೆ. ಉಭಯ ಪಕ್ಷಗಾರರು, ವಕೀಲರು ಇದರ ಸದುಪಯೋಗ ಪಡೆಯಲಿ. ನ್ಯಾಯಾಲಯಕ್ಕೆ ದಾಖಲಾಗುವ ಪ್ರಕರಣಗಳು ಕಡಿಮೆಯಾಗಲಿ ಎಂಬುದು ಸುಪ್ರೀಂ ಕೋರ್ಟ್ ಉದ್ದೇಶ. ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಅವರ ಮಾರ್ಗದರ್ಶನದಂತೆ ಜಿಲ್ಲೆಯಲ್ಲೂ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕಾಯಂ ಜನತಾ ನ್ಯಾಯಾಲಯ ಸೇವೆ : ಖರ್ಚು ರಹಿತವಾಗಿ ಹಾಗೂ ಶ್ರೀ ಪ್ರಕರಣ ಇತ್ಯರ್ಥಕ್ಕೆ ಕಾಯಂ ಜನತಾ ನ್ಯಾಯಾಲಯಗಳಿವೆ. ಇದು ಸಾರ್ವಜನಿಕರಿಗೆ ವರವಾಗಿದೆ. 2007ರಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಕಾಯಂ ಜನತಾ ನ್ಯಾಯಾಲಯ ಆರಂಭಿಸಿದೆ. ಕೊಪ್ಪಳ ಧಾರವಾಡ ನ್ಯಾಯಾಲಯಕ್ಕೆ ಒಳಪಡುತ್ತದೆ. ಇಲ್ಲಿ ಹೆಚ್ಚು ಪ್ರಕರಣಗಳು ದಾಖಲಾದರೆ, ನ್ಯಾಯಾಧೀಶರು ಇಲ್ಲಿಗೆ ಬಂದು ಪ್ರಕರಣ ಪರಿಹರಿಸಲಿದ್ದಾರೆ.
ಭೂ, ಜಲ, ವಾಯು ಸಾರಿಗೆ, ಅಂಚೆ, ದೂರವಾಣಿ ಸೇವೆ, ವಿದ್ಯುತ್, ನೀರು, ಜೆಸ್ಕಾಂ, ಚೆಕ್ಬೌನ್ಸ್, ಸಾರ್ವಜನಿಕ ನೈರ್ಮಲ್ಯ, ಆಸ್ಪತ್ರೆ, ಶಿಕ್ಷಣ, ವಿಮೆ, ಹಣಕಾಸು ವ್ಯವಹಾರ, ರಿಯಲ್ ಎಸ್ಟೇಟ್, ರಾಜ್ಯ&ಕೇಂದ್ರ ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಆರಂಭಿಸಿದ ಸೇವೆಗಳಲ್ಲಿನ ಲೋಪಗಳು ಇದರ ವ್ಯಾಪ್ತಿಗೆ ಬರಲಿವೆ. ವಕೀಲರ ನೆರವಿಲ್ಲದೆಯೂ ಸಾರ್ವಜನಿಕರು ನೇರವಾಗಿ ಬಂದು ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಅರ್ಜಿ ನೀಡಬಹುದು ಎಂದು ಮಾಹಿತಿ ನೀಡಿದರು.