ಕೊಪ್ಪಳ: ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ ಹಾಗೂ ದುರಾಡಳಿತದಲ್ಲಿ ನಿರತವಾಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಅಂತ್ಯಕಾಲ ಸನಿಹವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ವಾಗ್ದಾಳಿ ನಡೆಸಿದರು.
ಸಾರಿಗೆ ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ನಿಂದ ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಸ್ವತ@ ಕೊಪ್ಪಳ ಶಾಸಕರು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳು ಮಾಯವಾಗಿವೆ. ಮರಳು ದಂಧೆ ಹೆಚ್ಚಿದೆ. ಹಿರೇ ಹಳ್ಳದಲ್ಲಿ ನಿತ್ಯ ನೂರಾರು ಜೆಸಿಬಿ, ಟಿಪ್ಪರ್ಗಳು ಕನ್ನ ಹಾಕುತ್ತಿವೆ. ಕುಟುಂಬ ರಾಜಕಾರಣ ಹೆಚ್ಚಿದೆ. ಕೊಪ್ಪಳ ರಿಪಬ್ಲಿಕ್ ಆಗಿ ಪರಿವರ್ತನೆಯಾಗುತ್ತಿದೆ. ಮೂರು ಬಾರಿ ಶಾಸಕರಾದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಜನ ಇವರಿಗೆ ತಕ್ಕ ಪಾಠ ಕಲಿಸಲಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನ ಸಿಎಂ ಸಿದ್ದರಾಮಯ್ಯ ಮೇಲೆ ಹೆಚ್ಚಿನ ನಿರೀೆ ಇಟ್ಟಿದ್ದರು. ಆದರೆ, ಜನರ ಭಾವನೆಗೆ ಅವರು ಕೊಳ್ಳಿ ಇಟ್ಟಿದ್ದಾರೆ. ಬಸ್, ಹಾಲಿನ ದರ ಹೆಚ್ಚಳವಾಗುತ್ತಿದೆ. ಗುತ್ತಿಗೆದಾರರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಒಳಜಗಳ ತಾರಕಕ್ಕೇರಿದೆ. ಬಸ್ ದರ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಒಂದೆಡೆ ಪುಕ್ಕಟ್ಟೆ ಯೋಜನೆ ನೀಡಿ, ಮತ್ತೊಂದೆಡೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದರು.
ಪ್ರಮುಖರಾದ ಮಲ್ಲನಗೌಡ ಕೋನನಗೌಡ, ಈಶಪ್ಪ ಮಾದಿನೂರು, ಕರಿಯಪ್ಪ ಹಾಲವರ್ತಿ ಮಾತನಾಡಿದರು. ಪ್ರತಿಭಟನೆ ಬಳಿಕ ಎಸಿ ಕ್ಯಾ.ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಪ್ರಮುಖರಾದ ದೇವಪ್ಪ ಕಟ್ಟಿಮನಿ, ಶರಣಪ್ಪ ಜಡಿ, ವೀರೇಶಗೌಡ ಬಗನಾಳ, ರಮೇಶ ಡಂಬರಳ್ಳಿ, ಹುಚ್ಚ್ಚಪ್ಪ ಚೌದ್ರಿ, ಮಂಜುನಾಥ ಕುಣಕೇರಿ, ಯಮನಪ್ಪ ಕಟಿಗಿ, ಸೋಮನಗೌಡ, ಶಾಂತಕುಮಾರ, ಆನಂದ ಕರ್ಕಿಹಳ್ಳಿ, ಮೂರ್ತೆಪ್ಪ ಗೀಣಗೇರಿ, ಮಹೇಶ ಆಗಳಕೇರಿ, ದೇವರಾಜ ಆಗಳಕೇರಿ, ಮೆಹಮೂದ ಹುಸೇನಿ ಬಲ್ಲೆ, ವಿರೂಪಾಕ್ಷಗೌಡ, ವಸಂತ ಹಟ್ಟಿ, ಪ್ರವಿಣ ಇಟಗಿ, ರುದ್ರೇಶ ಕೊಪ್ಪಳ, ಭೀಮರಡ್ಡಿ ಗದ್ದಿಕೇರಿ, ವಿಜಯ ಕುಮಾರ್ ಪೂಜಾರ, ಮಂಜುನಾಥ್ ಸೊರಟೂರ ಇತರರಿದ್ದರು.