ಜಿಲ್ಲೆ

ಉಪ‌ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಡಸ್ಟ್ ಬಿನ್ ಗೆ : ಜನಾರ್ದನ ರೆಡ್ಡಿ ಭವಿಷ್ಯ

ಕೊಪ್ಪಳ: ಕಾಂಗ್ರೆಸ್ ಏನೇ ಮಾಡಿದರೂ ಉಪ‌ ಚುನಾವಣೆಯಲ್ಲಿ ಗೆಲ್ಲುವುದಿಲ್ಲ.‌ ಬೈ ಎಲೆಕ್ಷನ್ ಬಳಿಕ‌ ಕಾಂಗ್ರೆಸ್ ನ ಗ್ಯಾರಂಟಿಗಳೆಲ್ಲ ಡಸ್ಟ್ ಬಿನ್ ಸೇರಲಿವೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.

ಚುನಾವಣೆ ನೆಪ ಅಷ್ಟೆ. ಮತದಾರರು ಕಾಂಗ್ರೆಸ್ ಸೋಲಿಸಲು ನಿರ್ಧರಿಸಿದ್ದಾರೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಚ್ಚು ಅಂತರದಿಂದ ಗೆಲ್ಲುವರು. ಸಂಡೂರಿನಲ್ಲೂ ದೊಡ್ಡ ಬದಲಾವಣೆ ಆಗಲಿದೆ. ಶೇ.100ರಷ್ಟು ಬಿಜೆಪಿ ಗೆಲ್ಲಸಿ ಪ್ರಧಾನಿ ಮೋದಿ ಅವರಿಗೆ ಕಾಣಿಕೆ‌ ನೀಡುತ್ತೇವೆ ಎಂದು‌ ಶುಕ್ರವಾರ ಗಂಗಾವತಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ವಿಶ್ವಾಸ ವ್ಯಕ್ತಪಡಿಸಿದರು.

ವಕ್ಫ್ ಕಾನೂನನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡುತ್ತಿದೆ. ಸಚಿವ ಜಮೀರ್ ಅಹಮದ್ ಕೋಮು ವಿಚಾರ ಪ್ರದರ್ಶಿಸುವ ಮೂಲಕ‌ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾನೆ. ಇದರಲ್ಲಿ ಕಾಂಗ್ರೆಸ್ ಸುಟ್ಟು ಬೂದಿ ಆಗಲಿದೆ. ಯಾರದೋ ವೈಯಕ್ತಿಕ ಸ್ವಾರ್ಥಕ್ಕೆ ಹಿಂದು, ಮುಸ್ಲಿಮ್ ರೈತರನ್ನು ಬಲಿ ಮಾಡುವ ಕೆಲಸ ನಡೆಯುತ್ತಿದೆ. ಒಂದೊಮ್ಮೆ ಈ ವಿಷಯವಾಗಿ ಕೋಮು ಗಲಭೆಗಳಾದಲ್ಲಿ ಅದಕ್ಕೆ ಜಮೀರ್ ನೇರ ಹೊಣೆ ಎಂದು ಆರೋಪಿಸಿದರು.

ಮುಡಾ ಸೇರಿದಂತೆ ಇತರ ಹಗರಣ ಮಾಡಿ ಎಂದು ಕಾಂಗ್ರೆಸ್ಸಿಗರಿಗೆ ಯಾರು ಹೇಳಿದ್ದು ? ಅವರು ಮಾಡಿದ್ದನ್ನು ಅವರೇ ಅನುಭವಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಮೂಲ ಕಾಂಗ್ರೆಸ್ಸಿಗರು ಯತ್ನ ನಡೆಸಿದ್ದಾರೆ. ಅದರ ಭಾಗವಾಗಿಯೇ ಎಲ್ಲ ಬೆಳವಣಿಗೆ ನಡೆಯುತ್ತಿವೆ. • ಗಾಲಿ‌ ಜನಾರ್ದನ ರೆಡ್ಡಿ. ಗಂಗಾವತಿ‌ ಶಾಸಕ.