ಜಿಲ್ಲೆ

ಕೊಪ್ಪಳದಲ್ಲಿ ಜಾನಪದ ಗಾಯನ ಕಾರ್ಯಕ್ರಮ

Kopala - Raveendra V K

ಕೊಪ್ಪಳ: ಆಧುನಿಕತೆಯಲ್ಲಿ ಜಾನಪದ ಸೊಗಡು ಮಾಯವಾಗುತ್ತಿದೆ. ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್​ ಹೇಳಿದರು.

ನಗರದ ಗವಿಸಿದ್ದೇಶ್ವರ ಬಿಇಡಿ ಕಾಲೇಜಿನಲ್ಲಿ ಜಾನಪದ ಅಕಾಡೆಮಿಯಿಂದ ಗುರುವಾರ ಹಮ್ಮಿಕೊಂಡಿದ್ದ ಗಿಡ-ಗಿಡಕ ಕೂತು ಕೈಮಾಡಿ ಕರೀತಾವ ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯಾ ಜಿಲ್ಲೆಯ ಸೊಗಡು ಪರಿಚಯಿಸುವಂತೆ ವಿವಿಧ ಹೆಸರುಗಳಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ರಿಯಾಲಿಟಿ ಇಲ್ಲದ ಕಾರ್ಯಕ್ರಮ ರೂಪಿಸಿ ಅವುಗಳನ್ನೇ ರಿಯಾಲಿಟಿ ಶೋಗಳೆಂದು ತೋರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದನ್ನು ತಪ್ಪಿಸಿ ಯು ಪೀಳಿಗೆ ಜಾಗೃತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಬಂಧಗಳನ್ನು ಸಾಲದ ರೂಪದಲ್ಲಿ ಪಡೆವ ಕಾಲ ಬಂದಿದೆ. ಜನಪದ ಆಹಾರ, ವೈದ್ಯಕಿಯ ಪದ್ಧತಿ, ಜೀವನ ಕ್ರಮವನ್ನು ನಾವು ಉಳಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.

ಸಾಹಿತಿ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್​ ಮಾತನಾಡಿ, ಜನಪದ ಎಂದರೆ, ಒಂದು ಭಾಗವಾಗಿದ್ದು, ಜನಪದ ಸಾಹಿತ್ಯ, ಜನಪದ ಸಂಗೀತ, ಜನಪದ ಸಂಸ್ಕತಿ, ಜನಪದ ಊಟೋಪಚಾರಗಳು, ಜನಪದ ಉಡುಗೆ-ತೊಡುಗೆಗಳು, ಜನಪರ ವಾದ್ಯಗಳು, ಇವೆಲ್ಲವುಗಳ ಸಮಗ್ರವಾದುದೇ ಜಾನಪದ. ಸಿಂಪಿ ಲಿಂಗಣ್ಣ ಮತ್ತು ದ.ರಾ ಬೇಂದ್ರ ರವರು ಹಳ್ಳಿ-ಹಳ್ಳಿಗಳಿಂದ ಅನೇಕ ಹಾಡುಗಳು, ಕಥೆಗಳು, ಅನೇಕ ಅಂತಿ ಪದಗಳನ್ನು ಸಂಗ್ರಹ ಮಾಡುವ ಮೂಲಕ ಜನಪದ ಉಳುವಿಕೆಗೆ ಶ್ರಮಿಸಿದ್ದಾರೆ ಎಂದರು.

ಅಕಾಡೆಮಿ ಸದಸ್ಯ ಡಾ.ಜೀವನಸಾಬ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಜನಾಪದ ಕಲಾವಿದರು ಕಲೆ ಪ್ರದರ್ಶಿಸಿದರು. ಕಾಲೇಜು ಪ್ರಾಚಾರ್ಯ ಡಾ.ಎಸ್​.ಬಿ.ಕಂಬಾರ, ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿಗಳಾದ ಎ.ಎಂ.ಮದರಿ, ಅಲ್ಲಮಪ್ರಭು ಬೆಟ್ಟದೂರು, ಅಕಾಡೆಮಿ ಸದಸ್ಯ ಮೆಹಬೂಬ ಕಿಲ್ಲೆದಾರ, ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾಧ್ಯಕ್ಷ ಶರಣಪ್ಪ ವಡಿಗೇರಿ, ಕನ್ನಡ ಜಾನಪದ ಪರಿಷತ್​ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ, ಕರ್ನಾಟಕ ಚಲಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಇತರರಿದ್ದರು.