ಕೊಪ್ಪಳ: ಹಿರೇಹಳ್ಳ ನೀರಾವರಿ ಯೋಜನೆಯಡಿ ಪುನರ್ವಸತಿ ಗ್ರಾಮಗಳ ಕಾಮಗಾರಿಗಳಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಅಳವಂಡಿ, ಕಿನ್ನಾಳ, ಗದಗ ಜಿಲ್ಲೆಯ ಮುಂಡರಗಿ ಹಾಗೂ ಧಾರವಾಡ ಕಚೇರಿಗಳಿಗೆ ಏಕಕಾಲಕ್ಕೆ ತೆರಳಿದ ಲೋಕಾಯುಕ್ತ ಪೊಲೀಸರು ದಾಖಲೆ ಶೋಧ ಕಾರ್ಯ ನಡೆಸಿದರು.
ಕಿನ್ನಾಳ ಡ್ಯಾಂ ನಿರ್ಮಾಣ ಹಿನ್ನೆಲೆಯಲ್ಲಿ ಕುಕನೂರು ತಾಲೂಕಿನ ವೀರಾಪುರ, ಶಿರೂರು, ಮುತ್ತಾಳ, ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಕೋಟ್ಯಂತರ ರೂ. ಅನುದಾನ ಖರ್ಚುಮಾಡಿ ಕಾಮಗಾರಿ ನಿರ್ವಹಿಸಲಾಗಿದೆ. ರಸ್ತೆ, ಸಮುದಾಯ ಭವನ, ಚರಂಡಿ, ಕುಡಿವ ನೀರು ಕಾಮಗಾರಿ, ಶಾಲಾ ಕಟ್ಟಡ ಸೇರಿ ಇತರ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವು ಕಳಪೆಯಾಗಿದ್ದರೆ, ಇನ್ನೂ ಕೆಲ ಕಾಮಗಾರಿ ನಿರ್ವಹಿಸಿಲ್ಲವೆಂಬ ಆರೋಪಗಳಿವೆ. ಸರ್ಕಾರಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ನಷ್ಟವಾದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.
14 ಇಂಜಿನಿಯರ್ಗಳು ಹಾಗೂ ಗುತ್ತಿಗೆದಾರರು ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಅಂಗವಾಗಿ ಲೋಕಾಯುಕ್ತ ಡಿಎಸ್ಪಿ ವಸಂತಕುಮಾರ್ ನೇತೃತ್ವದಲ್ಲಿ ನಾಲ್ಕು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಸಿಂಗಟಾಲೂರು ಯೋಜನೆಯ ಮುಂಡರಗಿ ಇಇ ಕಚೇರಿ, ಅಳವಂಡಿ ಹಾಗೂ ಕಿನ್ನಾಳದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಲೆಕ್ಕಾಧಿಕಾರಿ, ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮುಂದುವರೆದಿದೆ. ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.