ಕೊಪ್ಪಳ: ಯೋಗದಿಂದ ದೇಹ&ಮನಸ್ಸು ಸದೃಢವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತದಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಪರಂಪರೆಯಿಂದ ಬಂದ ಯೋಗ ಇಂದು ವಿಶ್ವ ಮನ್ನಣೆ ಪಡೆದಿದೆ. ಜಗತ್ತಿನ ನೂರಾರು ದೇಶಗಳು ಯೋಗ ದಿನಾಚಣೆ ಮಾಡುತ್ತಿವೆ. ಒತ್ತಡದ ಬದುಕಿಗೆ ಶಾಂತಿ ನೀಡಲು ಯೋಗ ಸಹಕಾರಿ. ಎಲ್ಲರೂ ನಿತ್ಯ ಜೀವನದಲ್ಲಿ ಯೋಗಭ್ಯಾಸ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ವೈ.ಜೆ.ಶಿರವಾರ ಯೋಗಭ್ಯಾಸ ನಡೆಸಿಕೊಟ್ಟರು. ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ ಇತರರು ಭಾಗಿಯಾಗಿ ಯೋಗ ಮಾಡಿದರು. ಆಯುಷ್ ಇಲಾಖೆಯಿಂದ ರೇಷ್ಮಾ ಮತ್ತು ಸಂಗಡಿಗರು ಯೋಗ ನೃತ್ಯ ಪ್ರದರ್ಶಿಸಿದರು.
ತಾಪಂನಿಂದ ಗಿಣಿಗೇರಾದಲ್ಲಿ ಆಚರಣೆ : ತಾಪಂನಿಂದ ಕೊಪ್ಪಳ ತಾಲೂಕಿನ ಗಿಣಿಗೇರಾ ಅಮೃತ ಸರೋವರ ಕೆರೆ ಅಂಗಳದಲ್ಲಿ ಯೋಗ ದಿನ ಆಚರಿಸಲಾಯಿತು. ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಮಾತನಾಡಿದರು. ಭಾಗಿಯಾದ ಗ್ರಾಮಸ್ಥರಿಗೆ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಿಸಲಾಯಿತು. ಡಾ.ಕಳಕೇಶ, ಪಿಡಿಒ ಮಂಜುಳಾದೇವಿ ಹೂಗಾರ, ಗ್ರಾಪಂ ಅಧ್ಯೆ ರಂಜಿತಾ ಚೌವ್ಹಾಣ್, ಉಪಾಧ್ಯಕ್ಷ ಮಂಜುನಾಥ ಪಾಟೀಲ್, ಸದಸ್ಯ ಕರಿಯಪ್ಪ ಮೇಟಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಇತರರಿದ್ದರು.
ಸರ್ಕಾರಿ ಮಹಿಳಾ ಪದವಿ ಕಾಲೇಜು: ಕೊಪ್ಪಳ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ದೈಹಿಕ ಶಿಕ್ಷಣ ಬೋಧಕ ಡಾ.ಪ್ರದಿಪ್ ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾದ ಡಾ.ನರಸಿಂಹ, ಶಿವಪ್ಪ ಬಡಿಗೇರ, ನೌಕರ ಹನುಮಂತಪ್ಪ ಹಾಗೂ ವಿದ್ಯಾರ್ಥಿನಿಯರಿದ್ದರು.