ಕೊಪ್ಪಳ: ನಗರದ ಜಿಲ್ಲಾಸ್ಪತ್ರೆ, ಔಷಧ ಉಗ್ರಾಣ, ಸಖಿ ಒನ್ ಸ್ಟಾಪ್ ಸೆಂಟರ್ಗೆ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಔಷಧ ಉಗ್ರಾಣದಲ್ಲಿ ಔಷಧಗಳ ಬಗ್ಗೆ ಸಿಬ್ಬಂದಿಗೆ ವಿಚಾರಿಸಿದರು. ಸರಿಯಾಗಿ ಆವಕ ಆಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು. ಬಳಿಕ ಸಖಿ ಒನ್ ಸ್ಟಾಪ್ ಸೆಂಟರ್ಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ಬಗ್ಗೆ ವಿಚಾರಿಸಿದರು. ಸರಿಯಾದ ಸ್ಪಂದನೆ ನೀಡುತ್ತಿದ್ದಾರಾ ಎಂದು ಪ್ರಶ್ನಿಸಿದರು. ಊಟದ ಕೊಠಡಿಗೆ ತೆರಳಿ ನಿತ್ಯ ಎಷ್ಟು ರೋಗಿಗಳಿಗೆ ಊಟ ನೀಡಲಾಗುವುದು, ಏನೇನು ನೀಡುವಿರೆಂದು ಸಿಬ್ಬಂದಿಗೆ ಕೇಳಿ ತಿಳಿದುಕೊಂಡರು. ಮೊಟ್ಟೆ, ಹಾಲು, ಕಾಳು ಹಾಗೂ ಆಹಾರ ಸ್ವಚ್ಛತೆ, ಗುಣಮಟ್ಟ ವೀಸಿದರು. ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಎಲ್ಲರಿಗೂ ಸರಿಯಾಗಿ ಸ್ಪಂದಿಸಿ. ಅಗತ್ಯ ಚಿಕಿತ್ಸೆ ನೀಡಿ. ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಿಬ್ಬಂದಿ ಕುಂದು, ಕೊರತೆ ಆಲಿಸಿದರು.