ಜಿಲ್ಲೆ

ಹೊಸ್ಕೇರಾ ಸ್ಮಶಾನ ಸಮಸ್ಯೆಗೆ ಸ್ಪಂದನೆ

ಕೊಪ್ಪಳ: ಹೊಸ್ಕೇರಾ ಡಗ್ಗಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನಕ್ಕೆ ತೊಂದರೆ ಆಗಿದ್ದಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಈಗಿರುವ ಸರ್ಕಾರಿ ರುದ್ರಭೂಮಿಯಲ್ಲಿ ಎಲ್ಲ ವರ್ಗದವರೂ ಅಂತ್ಯಸಂಸ್ಕಾರ ಕ್ರಿಯೆ ನಡೆಸಬಹುದು. ಯಾರೂ ಅಡ್ಡಿಪಡಿಸುವಂತಿಲ್ಲವೆಂದು ತಾಕೀತು ಮಾಡಿದೆ. ಹೀಗಾಗಿ ನಾವು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನೆ ಕೈ ಬಿಟ್ಟಿದ್ದೇವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಜಿಲ್ಲಾಧ್ಯಕ್ಷ ಬಸವರಾಜ ಎಂ.ತಿಳಿಸಿದರು.

ನ.8ರಂದು ಗ್ರಾಮಕ್ಕೆ ಎಡಿಸಿ ಸಿದ್ರಾಮೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ದಲಿತರು, ಸವರ್ಣೀಯರನ್ನು ಕರೆದು ಸಭೆ ಮಾಡಿದರು. ನಮ್ಮ ಸಮಸ್ಯೆ ಆಲಿಸಿದರು. ಸಮುದಾಯಕ್ಕೊಂದು ಸ್ಮಶಾನ ನೀಡಲು ಬರುವುದಿಲ್ಲ. ಎಲ್ಲರಿಗೂ ಒಂದೇ ಸ್ಮಶಾನ ಭೂಮಿ ಇದೆ. ಎಲ್ಲರೂ ಅದರಲ್ಲೇ ಅಂತ್ಯ ಸಂಸ್ಕಾರ ಕ್ರಿಯೆ ನಡೆಸಿ ಎಂದಿದ್ದಾರೆ. ಇಗಿರುವ ಜಾಗ ಒತ್ತುವರಿಯಾಗಿದೆ. ಅದನ್ನು 15 ದಿನದಲ್ಲಿ ತೆರವು ಮಾಡುವಂತೆ ಸೂಚಿಸಿದ್ದಾರೆ. ಗ್ರಾಮಸ್ಥರೂ ನಮಗೆ ಯಾವುದೇ ತೊಂದರೆ ಕೊಡುವುದಿಲ್ಲವೆಂದು ಹೇಳಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಸಂಟನೆ ಪದಾಧಿಕಾರಿಗಳು ಅಧಿಕಾರಿಗಳ ಭರವಸೆ ನಂಬಿದ್ದೇವೆ. ಪ್ರತಿಭಟನೆ ಹಿಂಪಡೆದುಕೊಂಡಿದ್ದೇವೆ. ಗ್ರಾಮದಲ್ಲಿ ಮೇಲ್ವರ್ಗದ ಬಹುಪಾಲು ಜನರು ನಮ್ಮೊಡನೆ ಹೊಂದಿಕೊಂಡಿದ್ದಾರೆ. ಆದರೆ, ಕೆಲವರಿಂದ ವಾತಾವರಣ ಹಾಳಾಗುತ್ತಿದೆ. ನಾವೂ ಇಷ್ಟು ದಿನ ತಾಳ್ಮೆಯಿಂದ ಇದ್ದೆವು. ಮಿತಿ ಮೀರಿದಾಗ ಹೋರಾಟಕ್ಕೆ ಮುಂದಾಗಿದ್ದೆವು. ಈಗ ವಾಪಸ್​ ಪಡೆದಿದ್ದು, ಬೇಡಿಕೆ ಈಡೇರದಿದ್ದಲ್ಲಿ ಮುಂದೆ ಹೋರಾಟ ಮಾಡುತ್ತೇವೆ ಎಂದರು. ಪ್ರಮುಖರಾದ ಹನುಮಂತಪ್ಪ ಡಗ್ಗಿ, ಹುಸೇನಪ್ಪ ಕೆ., ಮರಿನಾಗಪ್ಪ, ಹುಲಗಪ್ಪ, ಭೀಮಪ್ಪ ಪೂಜಾರ, ಮಂಜುನಾಥ ಡಗ್ಗಿ ಇತರರಿದ್ದರು.