ಕೊಪ್ಪಳ: ಬಾಗಲಕೋಟೆಯಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂಜಾವೇ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಡಿಸಿ ನಲಿನ್ ಅತುಲ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಾಗಲಕೋಟೆಯಲ್ಲಿ ಹೋರಾಟ ನಿರತ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಸ್ವತ: ಎಸ್ಪಿ ಸೇರಿ ಸಿಪಿಐ ಹಾಗೂ ಇತರ ಪೊಲೀಸರು ಹಿಂದು ಕಾರ್ಯಕರ್ತರನ್ನ ಥಳಿಸಿದ್ದಾರೆ. ಒಬ್ಬೊಬ್ಬರನ್ನು ಏಳೆಂಟು ಪೊಲೀಸರು ಹಿಡಿದು ಬೂಟುಗಾಲಿನಿಂದ ಒದ್ದು, ಲಾಠಿಯಿಂದ ಪ್ರಹಾರ ನಡೆಸಿದ್ದಾರೆ. ಈ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ನಡೆಸಿದ್ದಾರೆ. ಯಾರದೋ ಕುಮ್ಮಕ್ಕಿನಿಂದ ಈ ರೀತಿ ವರ್ತಿಸಿದ್ದಾರೆಂದು ಆರೋಪಿಸಿದರು.
ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಾಮಾನ್ಯ ಹಿಂದುಗಳ ಪಾಡೇನು ? ತಕ್ಷಣ ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಬೇಕು. ಅನಗತ್ಯವಾಗಿ ಹಿಂಸೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೇದಿಕೆ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ವೇದಿಕೆ ಸಂಚಾಲಕರಾದ ಹನುಮಂತ ರಡ್ಡಿ, ಅರುಣ್ ಹೂಗಾರ, ಚನ್ನಬಸವ ಹೂಗಾರ, ಅಯ್ಯನಗೌಡ ಕನಕಗಿರಿ, ವಿರೇಶ ಹಂಚಿನಾಳ, ಶರಣು ಗುಳದಾಳ, ವಿಶ್ವನಾಥ, ನೀಲಕಂಠ, ವರುಣ್ ಇತರರಿದ್ದರು.