ಕೊಪ್ಪಳ: ಆಯುಷ್ಮಾನ ಆರೋಗ್ಯ ಮಂದಿರಗಳ ರಾಜ್ಯ ಮಟ್ಟದ ಮೌಲ್ಯಮಾಪನ ವರದಿಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ಡಿಎಚ್ಒ ಡಾ ಟಿ.ಲಿಂಗರಾಜು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಿಂದ ಪ್ರತಿ ತಿಂಗಳು ಆಯುಷ್ಮಾನ ಆರೋಗ್ಯ ಮಂದಿರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಆರೋಗ್ಯ ಸೇವೆಗಳಾಧರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ, -ಆಯುಷ್ಮಾನ ಆರೋಗ್ಯ ಮಂದಿರಗಳಿಗೆ ಮತ್ತು ಜಿಲ್ಲಾವಾರು ರ್ಯಾಕಿಂಗ್ ನೀಡಲಾಗುತ್ತಿದೆ.
ಅದರನ್ವಯ ಕಳೆದ ಅಕ್ಟೋಬರ್ನಲ್ಲಿ ಜಿಲ್ಲೆಯ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಟಾಪ್ 10 ಬೆಸ್ಟ್ ರ್ಯಾಂಕಿಂಗ್ ಪಡೆದುಕೊಂಡಿವೆ. ಗೊಂಡಬಾಳ, ಕೂಕನಪಳ್ಳಿ ಹಾಗೂ ಬೆಣಕಲ್ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರಗಳು ಎಲ್ಲ ಆರೋಗ್ಯ ಕಾರ್ಯಕ್ರಮಗಳಲ್ಲಿ ಶೇ.100 ಗುರಿ ಸಾಧಿಸಿ ರಾಜ್ಯದಲ್ಲಿ ಮೊದಲ, ಎರಡನೇ ಹಾಗೂ 3ನೇ ಸ್ಥಾನ ಪಡೆದಿವೆ. ನವಲಿ ಹಾಗೂ ಹೂಲಗೇರ ಆಯುಷ್ಮಾನ ಆರೋಗ್ಯ ಮಂದಿರ ಶೇ.98 ಗುರಿ ಸಾಧಿಸಿ ರಾಜ್ಯದಲ್ಲಿ 4 ಮತ್ತು 5ನೇ ಸ್ಥಾನ ಪಡೆದಿವೆ. ಚಿಕೇನಕೊಪ್ಪ ಆರೋಗ್ಯ ಮಂದಿರ ಶೇ.97 ಗುರಿ ಸಾಧಿಸಿ 10ನೇ ಸ್ಥಾನ ಪಡೆದಿದೆ. ಜಿಲ್ಲಾವಾರು ರ್ಯಾಂಕಿಂಗ್ನಲ್ಲಿ ಕೊಪ್ಪಳ ಜಿಲ್ಲೆ ರಾಜ್ಯ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.