ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿನ ಆರೋಗ್ಯ ಕೇಂದ್ರವನ್ನು ಹೈಕೋರ್ಟ್​ ನ್ಯಾಯಾಧೀಶ ಎಂ.ಜಿ ಶುಕುರೆ ಕಮಾಲ ಶನಿವಾರ ಉದ್ಘಾಟಿಸಿದರು. ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ, ಉಪಾಧ್ಯಕ್ಷ ಬಿ.ವಿ.ಸಜ್ಜನ, ಡಾ.ಕೃಷ್ಣ ಓಂಕಾರ ಇದ್ದರು. 
ಜಿಲ್ಲೆ

ನ್ಯಾಯ ನೀಡಲು ಪ್ರಾಮಾಣಿಕ ಯತ್ನ ಇರಲಿ: ಯಾಧೀಶ ಎಂ.ಜಿ.ಶುಕುರೆ ಕಮಾಲ ಸಲಹೆ

ಕೊಪ್ಪಳ: ನ್ಯಾಯಾಂಗದಲ್ಲಿ ವಕೀಲರ ಪಾತ್ರ ಮುಖ್ಯ. ಪ್ರಾಮಾಣಿಕವಾಗಿ ಜನರಿಗೆ ನ್ಯಾಯ ಕೊಡಿಸಿ ಎಂದು ಹೈಕೋರ್ಟ್​ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಂ.ಜಿ ಶುಕುರೆ ಕಮಾಲ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಂದಿಂದ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಕೀಲ ವೃತ್ತಿ ಶ್ರೇಷ್ಠ. ನೊಂದವರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ವೃತ್ತಿಯೊಂದಿಗೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆಂದು ಅವಲೋಕನ ಮಾಡಿಕೊಳ್ಳಬೇಕಿದೆ. ನೊಂದವರು, ಸಂತ್ರಸ್ತರು, ಬಡವರಿಗೆ ನ್ಯಾಯ ಕೊಡಿಸಬೇಕು. ಯಾವುದೇ ಸಮಸ್ಯೆ ಇರಲಿ ಪರಿಹರಿಸಿ. ನಿರಾಕರಿಸಬೇಡಿ. ಹಿರಿಯ ವಕೀಲರಿಂದ ಕಿರಿಯರು ಮಾರ್ಗದರ್ಶನ ಪಡೆಯಿರಿ. ಲೋಕ ಅದಾಲತ್​ಗೆ ಅಗತ್ಯ ಸಹಕಾರ ನೀಡಿ. ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಹಕರಿಸಿ. ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಹಾಗೂ ವಕೀಲರ ಸಂಘದ ಬೇಡಿಕೆಗಳಿಗೆ ನ್ಯಾಯಾಂಗದ ಪರವಾಗಿ ಸಹಕಾರ ನೀಡುವೆ ಎಂದರು.

ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಮಾತನಾಡಿ, ಕಳೆದ ಲೋಕ ಅದಾಲತ್​ನಲ್ಲಿ 4,368 ಪ್ರಕರಣಗಳ ವಿಲೇವಾರಿ ಆಗಿದೆ. ಎಲ್ಲ ವಕೀಲರ ಸಹಕಾರದಿಂದ ಸಾಧ್ಯವಾಗಿದೆ. ಅವರಿಗೆ ಸಮಸ್ಯೆಗಳಿದ್ದರೂ ಕಲಾಪಗಳಿಗೆ ಯಾವುದೇ ತೊಂದರೆ ಆಗದಂತೆ ಸಹಕರಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ನಮ್ಮ ಸಂಘದಲ್ಲಿ 603 ವಕೀಲರಿದ್ದು, 300 ರಿಂದ 350 ವಕೀಲರು ದೈನಂದಿನ ವೃತ್ತಿಯಲ್ಲಿ ತೊಡಗಿದ್ದಾರೆ. 100 ವರ್ಷದ ಇತಿಹಾಸ ಹೊಂದಿದೆ. ಕಬೀರ್​ ಹಾಗೂ ಚಾಲಿಹಾಳ ವಕೀಲರು ಸೇರಿ ಅನೇಕ ಹಿರಿಯ ವಕೀಲರು ಸೇವೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ವಕೀಲರಿಗೆ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಾಗಿ ಇಷ್ಟು ವರ್ಷಗಳಾದರೂ ಜಿಲ್ಲಾ ನ್ಯಾಯಾಲಯ ಕಟ್ಟಡವಿಲ್ಲ. ನ್ಯಾಯಾಲಯಗಳ ಕಟ್ಟಡ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹಗಳು, ವಕೀಲರ ಭವನ ನಿಮಾರ್ಣ ಹಾಗೂ ಇತರ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ನ್ಯಾಯಾಧೀಶರು ಸಹಕರಿಸಬೇಕೆಂದು ಮನವಿ ಮಾಡಿದರು.

ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ಎಂ.ಆರ್​.ಒಡೆಯರ್​, ರಾಜ್ಯ ವಕೀಲರ ಪರಿಷತ್​ ಸದಸ್ಯ ಎಸ್​.ಆಸೀಫ್​ ಅಲಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ ಸಜ್ಜನ್​, ಪ್ರ.ಕಾ.ಪ್ರಕಾಶ ಎಲ್​.ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಕವಲೂರ, ಖಜಾಂಚಿ ರಾಜಾಸಾಬ ಬೆಳಗುರ್ಕಿ, ಹಿರಿಯ ವಕೀಲೆ ಸಂಧ್ಯಾ ಮಾದಿನೂರು ಸೇರಿ ಇತರರಿದ್ದರು.

ಆರೋಗ್ಯ ಕೇಂದ್ರ ಉದ್ಘಾಟನೆ
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆರಂಭಿಸಿರುವ ಆರೋಗ್ಯ ಕೇಂದ್ರವನ್ನು ಹೈಕೋರ್ಟ್​ ನ್ಯಾಯಾಧೀಶ ಎಂ.ಜಿ ಶುಕುರೆ ಕಮಾಲ ಉದ್ಘಾಟಿಸಿದರು. ಬಳಿಕ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಲಾಯಿತು. ಅಲ್ಲಿಂದ ಜಿಲ್ಲಾ ಕೇಂದ್ರಿಯ ಅಭಿಲೇಖಾಲಯಕ್ಕೆ ಭೇಟಿ ನೀಡಿ, ಕಡತ ಹಾಗೂ ದಾಖಲೆಗಳ ವೀಸಿದರು. ನ್ಯಾಯಾಧೀಶರು, ವಕೀಲರು, ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಕೇಂದ್ರ ಆರಂಭಿಸಲಾಗಿದೆ. ನ್ಯಾಯಾಧೀಶರಾದ ಮಹಾಂತೇಶ ಸಂಗಪ್ಪ ದರಗದ, ಭಾಗ್ಯಲಕ್ಷಿ$್ಮ, ಆದಿತ್ಯಕುಮಾರ್​ ಎಚ್​.ಆರ್​., ಡಿಎಚ್​ಒ ಡಾ.ಟಿ.ಲಿಂಗರಾಜು ಇತರರಿದ್ದರು.