ಕೊಪ್ಪಳ: ಸಮಾಜಕ್ಕೆ ಹಡಪದ ಸಮುದಾಯ ಸೇವೆ ಬಹಳಷ್ಟಿದೆ. ನಾವೆಲ್ಲ ಸುಂದರವಾಗಿ ಕಾಣಲು ಅವರೇ ಕಾರಣ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಹಡಪದ ಸಮಾಜ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಡಪದರು ಸೌಮ್ಯ ಸ್ವಭಾವದ ಜನ. ಎಲ್ಲರೂ ಶಿಕ್ಷಣ ಪಡೆಯಿರಿ. ನಿಮ್ಮ ಮಕ್ಕಳಿಗೆ ಉನ್ನತ ವ್ಯಾಸಾಂಗ ಮಾಡಿಸಿ. ಉನ್ನತ ಸ್ಥಾನಗಳಿಗೆ ಕಳಿಸಿ. ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ ನೀವು ಸಮಾಜಕ್ಕೆ ಅಗಾಧ ಸೇವೆ ಸಲ್ಲಿಸುತ್ತಿದ್ದೀರಿ. ನಿಮ್ಮ ಸೇವೆ ಅನನ್ಯ ಎಂದು ಆಶೀರ್ವದಿಸಿದರು.
ಮಾಜಿ ಶಾಸಕ ಬಸವರಾಜ ಹಿಟ್ನಾಳ ಮಾತನಾಡಿ, ಸಮುದಾಯದೊಂದಿಗೆ ನಾವಿದ್ದೇವೆ. ಮುಂದೆ ನಿಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವಹಿಸಿಕೊಡಲಾಗುವುದೆಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ಪಕ್ಷದಲ್ಲಿದ್ದರೂ ಸಮುದಾಯದ ಏಳಿಗೆಗೆ ಒಗ್ಗಟ್ಟಿನಿಂದ ಹೋರಾಡಿ ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಶರಣ ಹಡಪದ ಅಪ್ಪಣ್ಣನ ಆಶೀರ್ವಾದ ಸದಾ ಸಮುದಾಯಕ್ಕಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿದರು.
ಸಂದ ಜಿಲ್ಲಾ, ತಾಲೂಕು ಹಾಗೂ ನಗರ ಟಕ ಪದಾಧಿಕಾರಿಗಳಿಗೆ ಗಣ್ಯರು ಸಂವಿಧಾನ ಪೀಠಿಕೆ ಬೋಧಿಸಿದರು. ಜಿಲ್ಲಾ ಗೌರವ ಅಧ್ಯಕ್ಷ ಗವಿಸಿದ್ದಪ್ಪ ಮಾದಿನೂರು, ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ, ಪ್ರ.ಕಾ.ಗವಿಸಿದ್ದಪ್ಪ ಕಾಟ್ರಳ್ಳಿ, ಸಂಘಟನಾ ಕಾರ್ಯದರ್ಶಿ ಮಲ್ಲಪ್ಪ, ಖಜಾಂಚಿ ಮಾರ್ಕಂಡಯ್ಯ, ಬಸವರಾಜ, ಚಂದ್ರಶೇಖರ್, ಅನ್ನಪೂರ್ಣಮ್ಮ ಪ್ರಮಾಣ ವಚನ ಸ್ವೀಕರಿಸಿದರು.
ಸಮುದಾಯ ಮುಖಂಡರಾದ ಪ್ರಕಾಶ ದದೇಗಲ್, ಬಸವರಾಜ ಹುಣಸಿಹಾಳ, ಲಿಂಗರಾಜ ಹಾಲಳ್ಳಿ, ಮಲ್ಲಪ್ಪ ಚಟ್ನಿಹಾಳ, ಬಾಳಪ್ಪ ವೀರಾಪುರ ಇತರರಿದ್ದರು.