ಕೊಪ್ಪಳ: ಈಶಾನ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದವರು ಈವರೆಗೂ ಪರಿಷತ್ನಲ್ಲಿ ಅತಿಥಿ ಉಪನ್ಯಾಸಕರ ಪರ ಧ್ವನಿ ಎತ್ತಿಲ್ಲ. ಹೀಗಾಗಿ ಜೂನ್ 3ರಂದು ನಡೆವ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಲು ಅತಿಥಿ ಉಪನ್ಯಾಸಕರು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ನಾವು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ನಮಗೆ ಸೇವಾ ಭದ್ರತೆ ಸಿಕ್ಕಿಲ್ಲ. ಹಲವು ಹೋರಾಟ ನಡೆಸಿದ್ದೇವೆ. ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಚುನಾಯಿತರಾದವರು ನಮ್ಮ ಪರವಾಗಿ ಧ್ವನಿ ಎತ್ತುತ್ತಿಲ್ಲ. ಆಯ್ಕೆಯಾದವರೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಅತಿಥಿ ಉಪನ್ಯಾಸಕರ ಪರವಾಗಿ ಮಾತನಾಡುತ್ತಿಲ್ಲ. ಹೀಗಾಗಿ ಎಲ್ಲ ಅತಿಥಿ ಉಪನ್ಯಾಸಕರು ಸಭೆ ನಡೆಸಿ ಮತದಾನ ಬಹಿಷ್ಕರಣೆ ನಿರ್ಧಾರ ಕೈಗೊಳ್ಳುವುದಾಗಿ ಅತಿಥಿ ಉಪನ್ಯಾಸಕರಾದ ಡಾ.ತುಕಾರಾಂ, ಬಸವರಾಜ ಕರುಗಲ್ ತಿಳಿಸಿದ್ದಾರೆ.