ಕೊಪ್ಪಳ: ಅನ್ನಭಾಗ್ಯ ಯೋಜನೆಯಡಿ ಸರ್ಕಾರ ನಿಗದಿಪಡಿಸಿದಷ್ಟೇ ಪಡಿತರ ವಿತರಿಸಿ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನಗರದ ಜಿಪಂ ಜೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಡಿಮೆ ಅಕ್ಕಿ ವಿತರಿಸುತ್ತಾರೆಂಬ ದೂರು ಬರುತ್ತಿವೆ. ಸರ್ಕಾರ ನಿಗದಿಪಡಿಸಿದಷ್ಟೇ ಪ್ರಮಾಣದಲ್ಲಿ ನೀಡಿ. ಕಡಿಮೆ ವಿತರಿಸಬೇಡಿ. ಅಂಥವರ ಪರವಾನಗಿ ರದ್ದುಪಡಿಸಿ. ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆ ಸಮಯ ಹೆಚ್ಚಿಸಿ. ಆಹಾರ ಗುಣಮಟ್ಟ ಪರಿಶೀಲಿಸಿ. ವಿದ್ಯುತ್ ಬಿಲ್ ವಸೂಲಿ ವೇಳೆ ಜೆಸ್ಕಾಂ ಸಿಬ್ಬಂದಿ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿ. ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ನೋಡಿಕೊಳ್ಳಿ ಎಂದರು.
ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಬಡ ಜನರ, ಅಂಗನವಾಡಿ, ಶಾಲೆ ಮತ್ತು ಕುಡಿವ ನೀರಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಬಾಕಿಯಿದ್ದರೆ ಏಕಾಏಕಿ ವಿದ್ಯುತ್ ಕಡಿತಗೊಳಿಸಬೇಡಿ. ಸಮಾಧಾನದಿಂದ ಬಿಲ್ ಪಾವತಿಗೆ ಸೂಚಿಸಿ. ಯುವನಿಧಿ ಯೋಜನೆಯಡಿ ಜಿಲ್ಲೆಯ ಪ್ರಗತಿ ವಿವರದೊಂದಿಗೆ ನೋಂದಣಿಯಡಿ ಬಾಕಿ ಇರುವ ಅರ್ಜಿಗಳ ಸಂಖ್ಯೆ, ಸ್ಥಿತಿ-&ಗತಿ ಹಾಗೂ ಇತರ ಅಗತ್ಯ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗೃಹಲಕ್ಷಿ$್ಮ ಯೋಜನೆಯಡಿ ಜಿಲ್ಲೆಯಲ್ಲಿ 3,26,394 ಫಲಾನುಭವಿಗಳಿಗೆ ಮೇ- ಅಂತ್ಯದವರೆಗೆ ಡಿಬಿಟಿ ಮೂಲಕ 1203,88,38,000 ರೂ. ಪಾವತಿಸಲಾಗಿದೆ.ಗೃಹಜ್ಯೋತಿಯಡಿ 2,76,612 ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದೆ. ಶಕ್ತಿ ಯೋಜನೆಯಡಿ ಮೇ ಅಂತ್ಯದೊಳಗೆ 34,77,996 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿಯಡಿ 6,455 ಫಲಾನುಭವಿಗಳು ನೋಂದಣಿಯಾಗಿದ್ದು, 15.17 ಕೋಟಿ ರೂ. ಪಾವರಿಸಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್.ಜಿ., ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.