ಜಿಲ್ಲೆ

ಪಡಿತರ ಅಕ್ಕಿ ಕಳ್ಳ ಸಾಗನೆ ತಡೆಯಿರಿ, ರೆಡ್ಡಿ ಶ್ರೀನಿವಾಸ ಸೂಚನೆ

ಕೊಪ್ಪಳ: ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳ ಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್​ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಪಡಿತರ ಮಾರಾಟಕ್ಕೆ ಅವಕಾಶವಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸಿ. ಇಕೆವೈಸಿ ಮಾಡಿಸದ ಪಡಿತರದಾರರಿಗೆ ಕಡ್ಡಾಯವಾಗಿ ಮಾಡಿಸಿ. ಪಡಿತರ ವಿತರಣೆ ಸಮಯ ಹೆಚ್ಚಿಸಿದೆ. ಎಲ್ಲ ನ್ಯಾಯಬೆಲೆ ಅಂಗಡಿಯವರು ಸಮಯ ಪಾಲನೆ ಮಾಡಿ. ಆಹಾರ ಸಾಮಗ್ರಿ ವಿತರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿ. ಗೃಹಜ್ಯೋತಿ ಅರ್ಜಿ ಪರಿಶೀಲಿಸಿ. ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸಿ. ವಿದ್ಯುತ್​ ಬಿಲ್​ ಬಾಕಿ ವಸೂಲಿ ವೇಳೆ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದು ತಾಕೀತು ಮಾಡಿದರು.

ಗೃಹಲಕ್ಷಿ$್ಮ ಯೋಜನೆಯಡಿ ಜಿಲ್ಲೆಯ 3,17,804 ಫಲಾನುಭವಿಗಳಿಗೆ ಜೂನ್​ ಅಂತ್ಯದವರೆಗೆ ಡಿಬಿಟಿ ಮೂಲಕ 1277 ಕೋಟಿ ರೂ. ಪಾವತಿಯಾಗಿದೆ. ಗೃಹಜ್ಯೋತಿಯಡಿ ಜುಲೈ ಅಂತ್ಯಕ್ಕೆ 2,78,151 ಗ್ರಾಹಕರಿಗೆ ಉಚಿತ ವಿದ್ಯುತ್​ ಸೌಲಭ್ಯ ದೊರೆತಿದೆ. 37,204 ಅಂತ್ಯೋದಯ (ಎಎವೈ), 2,91,065 ಪಿ.ಎಚ್​.ಎಚ್​.(ಬಿಪಿಎಲ್​) ಕಾರ್ಡುಗಳಿಗೆ ಪಡಿತರ ವಿತರಿಸಲಾಗಿದೆ. ಎಎವೈ ಮತ್ತು ಪಿ.ಎಚ್​.ಎಚ್​. (ಎನ್​.ಎಫ್​.ಎಸ್​.ಎ ಸೆಂಟ್ರಲ್​) ಕಾರ್ಡ್​ಗಳಿಗೆ ಜೋಳ ನೀಡಲಾಗಿದೆ.

ಶಕ್ತಿಯೋಜನೆಯಡಿ ಜುಲೈ ಅಂತ್ಯಕ್ಕೆ 32,25,842 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಈವರೆಗೂ 303 ಕೋಟಿ ರೂ. ರ್ಖಚಾಗಿದೆ. ಯುವನಿಧಿಯಡಿ ಜೂನ್​ ಅಂತ್ಯಕ್ಕೆ 6,813 ಫಲಾನುಭವಿಗಳು ನೋಂದಣಿಯಾಗಿದ್ದು,17.20 ಕೋಟಿ ರೂ.ಪಾವತಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್​.ಜಿ., ನಾಗರಾಜ ಅರಳಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೇರಿ ಸದಸ್ಯರು ಇತರ ಅಧಿಕಾರಿಗಳಿದ್ದರು.