ಜಿಲ್ಲೆ

ಚಲನಶೀಲವಾಗಿರಲಿದೆ ಕಾವ್ಯ

Kopala - Raveendra V K

ಕೊಪ್ಪಳ: ಕಾವ್ಯ ಎಲ್ಲರಿಗೂ ದಕ್ಕುತ್ತದೆ ಎಂಬುದು ಜಡತ್ವ. ಕಾವ್ಯ ಯಾವತ್ತಿಗೂ ದಕ್ಕುವುದಿಲ್ಲ, ಚಲನಶೀಲವಾಗಿರುತ್ತದೆ ಎಂದು ಕವಿ ಮಹೇಶ್​ ಬಳ್ಳಾರಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಆಶು ಕವಿತೆ ರಚನಾ ಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.

ಕಾವ್ಯದೊಂದಿಗೆ ನಾವೂ ಚಲನಶೀಲರಾದಾಗ ಕೆಲ ಮಗ್ಗುಲುಗಳು ದಕ್ಕಬಹುದು. ವಿದ್ಯಾರ್ಥಿ ಕವಿಗಳಿಗೆ ನಿರಂತರ ಅಧ್ಯಯನ ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಮನೋಭಾವ ಇರಬೇಕು. ಈ ಪ್ರದೇಶ ಕನ್ನಡದ ತಿರುಳಿರುವ ನೆಲವಾಗಿದ್ದು, ಕವಿರಾಜಮಾರ್ಗ ಮತ್ತು ವಡ್ಡಾರಾಧನೆ ಎಂಬ ಸ್ವತಂತ್ರ ಕೃತಿಗಳನ್ನು ಕೊಟ್ಟ ಸಾಂಸತತಿಕ ಭೂಮಿ. ಇಂಥ ಪವಿತ್ರ ತಾಣದಿಂದ ಸಾಹಿತ್ಯದ ಮೇರು ಪ್ರತಿಭೆಗಳು ಬೆಳೆದು ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಡಾ.ಟಿ.ವಿ.ವಾರುಣಿ ಮಾತನಾಡಿ, ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ ಬೆಳವಣಿಗೆಗೆ ಸಹಕಾರಿ ಎಂದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗಾಯತ್ರಿ ಭಾವಿಕಟ್ಟಿ ಕವಿತೆ ಬರವಣಿಗೆ ಹಂತಗಳು ಮತ್ತು ರೂಪುರೇಷೆ ಬಗ್ಗೆ ಮಾತನಾಡಿದರು. ಪ್ರಾಚಾರ್ಯ ಡಾ.ಡಿ.ಎಚ್​.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಮೂವರು ವಿದ್ಯಾರ್ಥಿಗಳು ರಚಿಸಿದ ಅತ್ಯುತ್ತಮ ಆಶು ಕವಿತೆಗಳನ್ನು ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಯಿತು.

ಬೋಧಕ ಸಿಬ್ಬಂದಿ ಡಾ.ವಿಪ್ಲವಿ, ಡಾ.ಪ್ರಕಾಶ ಬಳ್ಳಾರಿ, ಡಾ.ಬೋರೇಶ್​, ಸೋಮೇಶ್​ ಉಪ್ಪಾರ್​, ಶಿವಬಸಪ್ಪ ಮಸ್ಕಿ, ಬಸವರಾಜ ಕರುಗಲ್​ ಇತರರಿದ್ದರು.