ಜಿಲ್ಲೆ

ಅಂತಾರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ

ಕೊಪ್ಪಳ: ಆರೋಗ್ಯ ಸುಧಾರಣೆಯಲ್ಲಿ ಆಯುರ್ವೇದ ಮಹತ್ವದ ಪಾತ್ರವಹಿಸಲಿದೆ. ಕ್ಷೇತ್ರದಲ್ಲಿ ನಡೆವ ಸಂಶೋಧನೆಗಳ ಬಗ್ಗೆ ಅಧ್ಯಯನ ಅಗತ್ಯ ಎಂದು ಆರೋಗ್ಯ ಭಾರತಿ ಸಂಸ್ಥೆ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ ಕುಮಾರ್​ ವಾರ್ಶ್ನೆ ಅಭಿಪ್ರಾಯಪಟ್ಟರು.

ನಗರದ ಮಧುಶ್ರೀ ಗಾರ್ಡನ್​ನಲ್ಲಿ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಗವಿದೀಪ್ತಿ ಕೌಶಲ ಭಾರತಿ-2.0 ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಎಲ್ಲರೂ ಅರಿಯಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆವ ಸಂಶೋಧನೆಗಳು, ಆವಿಷ್ಕಾರಗಳು, ಹೊಸತುಗಳ ಬಗ್ಗೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಸಂಕಿರಣ ಹಮ್ಮಿಕೊಂಡಿದ್ದು ವೈದ್ಯ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕ ಡಾ.ಪ್ರಸನ್ನ. ಎನ್​. ರಾವ್​ ಮಾತನಾಡಿ, ಮೂತ್ರವಹ ರೋಗಗಳಿಗೆ ಮನೆಮದ್ದಿನಿಂದ ಹಿಡಿದು ಶಸ್ತ್ರ ಚಿಕಿತ್ಸೆಯೂ ಲಭ್ಯವಿದೆ. ಆಯುರ್ವೇದೋಕ್ತ ವಿಶಿಷ್ಟ ಚಿಕಿತ್ಸೆಗಳು ಲಭ್ಯವಿವೆ. ಅವುಗಳ ಮೂಲಕ ಚಿಕಿತ್ಸೆ ಪಡೆಯಬಹುದು ಎಂದರು.

ಆಯುರ್ವೇದ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಸಂಜಯ ಕೊತಬಾಳ ಮಾತನಾಡಿ, ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ಮಾತನಾಡಿ, ಆಯುರ್ವೇದದ ಸಂಪೂರ್ಣ ಜ್ಞಾನದ ಜತೆಗೆ ಕೌಶಲ ಕಲಿತರೆ ವೈದ್ಯ ವೃತ್ತಿಯಲ್ಲಿ ಯಶಸ್ಸು ಕಾಣಬಹುದೆಂದರು.

ಡಾ.ಗಿರೀಶ.ಕೆ.ಜೆ, ಡಾ.ಕರುಣಾ ತಿಲಕೆ, ಡಾ.ಪ್ರತಿಮಾ ನಾಗೇಶ, ಡಾ.ಅನುಪಮಾ ವಿ., ಡಾ.ರವಿರಾಜ ಕಡ್ಲೆ, ಹೇಮಂತ ತೋಷಿಕಾನೆ ತಮ್ಮ ವಿಶೇಷ ಉಪನ್ಯಾಸ ನೀಡಿದರು. ಶಾರದಮ್ಮ ಕೊತಬಾಳ ಬಿ.ಬಿ.ಎಂ ಕಾಲೇಜು ನಿರ್ದೇಶಕ ಮಹೇಶ ಮುದುಗಲ್​ ಅಧ್ಯಕ್ಷತೆವಹಿಸಿದ್ದರು. ಡಾ.ಸಿದ್ದನಗೌಡ ಪಾಟೀಲ್​, ಉಪ ಪ್ರಾಚಾರ್ಯ ಡಾ.ಸುರೇಶ ಹಕ್ಕಂಡಿ, ಡಾ.ಲಕ್ಷಿ$್ಮ ಸಂಗಟಿ, ಡಾ.ನೇಹಾ, ಡಾ.ಕೆ.ಬಿ.ಹಿರೇಮಠ, ಡಾ.ಎಸ್​.ಕೆ.ಬನ್ನಿಗೋಳ, ಡಾ.ಗವಿಸಿದ್ದನಗೌಡ ಪಾಟೀಲ್​ ಇತರರಿದ್ದರು.