ಕೊಪ್ಪಳ: ಅಪ್ರಾಪ್ತ ಬಾಲಕನ ವಿವಾಹ ನೋಂದಣಿ ಮಾಡಿದ ಅಧಿಕಾರಿ ಹಾಗೂ ಸಾಕ್ಷಿ ಹಾಕಿದ ಮೂವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಗಂಗಾವತಿ ಉಪ ನೋಂದಣಾಧಿಕಾರಿ ಶ್ರೀಶೈಲ ಜಂಬಗಿ, ಸಾಕ್ಷಿದಾರರಾಗಿ ಸಹಿ ಹಾಕಿದ ಗಂಗಾವತಿ ಮುರಾರಿ ನಗರದ ಬಸವರಾಜ ಮುರಾರಿ, ಇಂದಿರಾ ನಗರದ ದೇವರಾಜ, ಆರ್.ಎಸ್. ಕಾಲನಿಯ ಶರಣಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿಯ ಶರಣಪ್ಪ ಸಿಂಗನಾಳ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತ ಹಾಗೂ ಯುವತಿಗೆ 2024ರ ಸೆಪ್ಟೆಂಬರ್ 17ರಂದು ಮದುವೆಯಾಗಿದೆ. ಈ ಸಂಬಂಧ 2025ರ ಜನೆವರಿ 27ರಂದು ಮದುವೆ ನೋಂದಣಿ ಮಾಡಲಾಗಿದೆ. ನೋಂದಣಿ ವೇಳೆ ದಾಖಲೆ ಪ್ರಕಾರ ವರನಿಗೆ 20 ವರ್ಷ 6 ತಿಂಗಳು 7 ದಿನಗಳಾಗಿವೆ. ಯುವತಿಗೆ 18 ವರ್ಷ 5 ತಿಂಗಳು 11ದಿನಗಳು ಆಗಿದ್ದವು. ಈ ಬಗ್ಗೆ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ವರನಿಗೆ ಮದುವೆ ವಯಸ್ಸಾಗದಿರುವುದು ದೃಢಪಟ್ಟಿದೆ. ಈ ಬಗ್ಗೆ ಸುಳ್ಳು ಸಾಕ್ಷ್ಯ ಸೃಷ್ಟಿಸಿ ಮದುವೆ ನೋಂದಣಿ ಮಾಡಿ ಬಾಲ್ಯವಿವಾಹ ಮಾಡಿಸಿದ್ದಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.