ಜಿಲ್ಲೆ

ಅನುದಾನ ಹಂಚಿಕೆಯಲ್ಲಿ ಸಿಎಂ ತಾರತಮ್ಯ, ಜನಾರ್ದನ ರೆಡ್ಡಿ ಆರೋಪ

ಕೊಪ್ಪಳ: ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ತಾರತಮ್ಯ ಮಾಡುತ್ತಿದ್ದಾರೆಂದು ಗಂಗಾವತಿ ಶಾಸಕ ಗಾಲಿ ಜಮಾರ್ದನರೆಡ್ಡಿ ಆರೋಪಿಸಿದರು.

ಮೆತಗಲ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಂಗಾವತಿ ಶಾಸಕನಾದ ನನಗೆ 25 ಕೋಟಿ ರೂ. ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ದಾರೆ. ಸಿಎಂ ಅಭಿವೃದ್ದಿಯಲ್ಲಿ ತಾರತಮ್ಯ ಮಾಡಬಾರದು. ಈ ಸಂಬಂಧ ಹೈಕೋರ್ಟ್ ಗೆ ಹೋಗಿದ್ದು ಏನಾಗುತ್ತೊ ನೋಡೋಣ ಎಂದರು.

ಕಳೆದ ಸೋಮುವಾರ ಕೊಪ್ಪಳದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಿದರು. ಅದು ಸರ್ಕಾರಿ ಕಾರ್ಯಕ್ರಮವಾದರೂ ಕಾಂಗ್ರೆಸ್ ಕಾರ್ಯಕ್ರಮ ಮಾಡಿದರು. ಹೀಗಾಗಿ ನಾವು ಕಾರ್ಯಕ್ರಮಕ್ಕೆ ಹೋಗಿಲ್ಲ. ರಾಜ್ಯದಲ್ಲಿ ಜನರಿಗೂ ಪೊಲೀಸರಿಂದ ರಕ್ಷಣೆ ಇಲ್ಲ. ಪೊಲೀಸರಿಗೂ ಸರಕಾರದಿಂದ ರಕ್ಷಣೆ ಇಲ್ಲ.ಯಾದಗಿರಿಯಲ್ಲಿ ಎಎಸ್ಐನನ್ನೇ ಕಿಡ್ನಾಪ ಮಾಡುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಸಂಘ ಪರಿವಾರದ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಜೋಕರ್. ಖರ್ಗೆಗೆ ಏನು ಮಾತಾಡಬೇಕು ಏನಿಲ್ಲ ಅನ್ನೋದು ಗೊತ್ತಿಲ್ಲ. ದೇಶದ ಸುರಕ್ಷತೆ, ಹುಟ್ಟಿರೋ‌ ಮಗುವಿಗೆ ಸಂಸ್ಕಾರ ಕಲಿಸುವ ರಾಷ್ಟ್ರೀಯತೆ ಸಂಸ್ಥೆ ಬಗ್ಗೆ ಖರ್ಗೆ ಮನಸ್ಸಿಗೆ ಬಂದಂತೆ ಮಾತಾಡುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೆಚ್ಚಿಸಲು ಹೇಳಿಕೆ ಕೊಡುತ್ತಿದ್ದಾರೆ. ವಿಧಾನ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಕಾಂಗ್ರೆಸ್ ವಿರೋಧಿಸಿತು‌. ಹೀಗಾಗಿ ಸಂಘದ ಬಗ್ಗೆ ಮಾತಾಡುತ್ತಿದ್ದಾರೆ ಎಂದರು.