ಜಿಲ್ಲೆ

ಗಂಗಾವತಿಯಲ್ಲಿ ಅಂಬೇಡ್ಕರ್ ಮೂರ್ತಿಗೆ ಕೆಚಪ್ ಎರಚಿದ ಕಿಡಿಗೇಡಿಗಳು, ದಲಿತ ಸಂಘಟನೆಯಿಂದ ದಿಢೀರ್ ಪ್ರತಿಭಟನೆ

ಗಂಗಾವತಿ(ಕೊಪ್ಪಳ): ನಗರದ ಅಂಬೇಡ್ಕರ್ ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಮೂರ್ತಿಗೆ ಕಿಡಿಗೇಡಿಗಳು ಕೆಚಪ್ ಎರಚಿದ‌ ದುಷ್ಕೃತ್ಯ ನಡೆದಿದೆ‌. ಇದನ್ನು ಖಂಡಿಸಿ ದಲಿತ ಸಂಘಟನೆಗಳು ವೃತ್ತದಲ್ಲಿ‌ ದಿಢೀರ್ ಪ್ರತಿಭಟನೆ ನಡೆಸಿವೆ.

ಮೂರ್ತಿಗೆ ಟೊಮ್ಯಾಟೊ ಸಾಸ್ ಹಾಕಿ ವಿರೂಪಗೊಳಿಸಲಾಗಿದೆ. ಇದರಿಂದ ಆಕ್ರೋಶಗೊಂಡ ದಲಿತಪರ ಸಂಘಟನೆಗಳ ಸಂಚಾಲಕರು ಪ್ರತಿಭಟನೆ ನಡೆಸಿದರು. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಕೆಂಡವಾದರು. ಕೂಡಲೇ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.

ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಗೌಡ ಪಾಟೀಲ್, ಪಿಐ ಪ್ರಕಾಶ ಮಾಳಿ, ಸಮಾಜ ಕಲ್ಯಾಣಾಧಿಕಾರಿ ಶರಣಪ್ಪ ರಾಠೋಡ್ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಭಟನಕಾರರು ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ವಿಷಯ ತಿಳಿದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನಕಾರರಿಗೆ ಬೆಂಬ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.