ಜಿಲ್ಲೆ

ಗಾಂಧಿ ಆಶಯದಂತೆ ಬಾಳೋಣ, ಡಿಸಿ ಸುರೇಶ ಇಟ್ನಾಳ ಹೇಳಿಕೆ

Kopala - Raveendra V K

ಕೊಪ್ಪಳ: ಮಹಾತ್ಮ ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆ ಮಾರ್ಗದೊಂದಿಗೆ ಸ್ವಚ್ಛತೆ, ಸರಳತೆಗೂ ಮಹತ್ವ ನೀಡಿದ್ದರು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್​ನಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಗಾಂಧಿ ಎಂದರೆ ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆ ಉತ್ತೇಜನ. ಗ್ರಾಮ ಸ್ವರಾಜ್​ ಅವರ ಕಲ್ಪನೆ. ಕಲಿಕೆ ಜತೆಗೆ ಕೌಶಲ ಇರಬೇಕು. ಅಂದಿನ ಕಾಲದಲ್ಲಿ ಅಸ್ಸಾಂ ವಿದ್ಯಾರ್ಥಿಗಳಿಗೆ ಕೌಶಲ ಕಲಿಕೆಗೆ ಪ್ರೋತ್ಸಾಹಿಸುತ್ತಿದ್ದರು. ಸ್ವಚ್ಛತೆ, ಸೇವೆಗೆ ಆದ್ಯತೆ ನೀಡಿದ್ದರು. ಅದರ ಅಂಗವಾಗಿ ಜಿಲ್ಲೆಯಲ್ಲಿ ಸ್ವಚ್ಛತೆ ಪಾಕ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳೋಣ ಎಂದರು.

ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಮಾತನಾಡಿ, ಗಾಂಧೀಜಿ ಸತ್ಯ, ಅಹಿಂಸಾ ತತ್ವ ಪಾಲಿಸಿದರು. ಮಾನವೀಯ ಮೌಲ್ಯ ಪ್ರತಿಪಾದಿಸಿದರು. ಸರಳತೆ ರೂಢಿಸಿಕೊಂಡಿದ್ದರು. ಅವರ ಹೋರಾಟ, ಸತ್ಯಾಗ್ರಹ ನಮಗೆಲ್ಲ ಮಾದರಿ ಎಂದು ತಿಳಿಸಿದರು.

ವಾರ್ತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಲಾವಿದ ಬಾಷು ಕಿನ್ನಾಳ ಹಾಗೂ ತಂಡದವರು ಭಜನೆ ಹಾಡಿದರು. ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ವಾರ್ತಾಧಿಕಾರಿ ಡಾ.ಸುರೇಶ ಜಿ. ಮಾತನಾಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಮಂಜುನಾಥ ಗೊಂಡಬಾಳ ಇತರರಿದ್ದರು.