ಜಿಲ್ಲೆ

ವಿಘ್ನೇಶ್ವರನಿಗೆ ಭಕ್ತಿಯ ನಮನ, ಮಳೆಯಲ್ಲೂ ಬೆನಕನ ನೆನಹು

ಕೊಪ್ಪಳ: ಭಕ್ತರ ಆರಾಧ್ಯ ದೈವ ವಿಘ್ನೇಶ್ವರನಿಗೆ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಯುವಕರು ಮೆರವಣಿಗೆ ಮೂಲಕ ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ನಗರದ ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತ, ಪ್ರಮುಖ ಕಡೆಗಳಲ್ಲಿ ಬಗೆ ಬಗೆ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಮಳೆ ನಡುವೆಯೂ ಸುಗಮವಾಗಿ ಪೂಜೆ ನೆರವೇರಿದವು. ಡೊಳ್ಳು ಹೊಟ್ಟೆ ಗಣಪ, ಚಿತ್ರಗುಪ್ತ ಗಣಪ, ರಾಜನಾಗಿರುವ ಗಣಪ ಹೀಗೆ ಬಗೆ ಬಗೆ ಥೀಮ್​ನಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೊಪ್ಪಳದ ಕೋಟೆ ಏರಿಯಾದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ 43 ವರ್ಷದಿಂದ ಗಣಪನ್ನು ಕೂಡಿಸುತ್ತಿದ್ದಾರೆ. ಈ ವರ್ಷ ಸೊಂಡಿಲಿನಲ್ಲಿ 10ರೂ. ನಾಣ್ಯ ಹಾಕಿದರೆ ಕೈಯಿಂದ ಪ್ರಸಾದ ಕೊಡುವ ವಿಶೇಷ ಮೂರ್ತಿ ಕೂಡಿಸಿದ್ದು ಭಕ್ತರನ್ನು ಸೆಳೆಯುತ್ತಿದೆ. ಉಳಿದಂತೆ ಶಿವಶಾಂತವೀರ ನಗರದ ಕೊಪ್ಪಳ ಕಾ ರಾಜ, ಬಸವೇಶ್ವರ ನಗರದ ಬುದ್ಧಿನಾಥ ಗಣಪತಿ, ಹಿಂದು ಮಹಾಮಂಡಳಿಯ 21 ಅಡಿ ಉದ್ದದ ಗಣಪ ಸೇರಿ ಇತರ ಪ್ರಮುಖ ಮಿತ್ರ ಮಂಡಳಿಗಳು ಮೂರ್ತಿಗಳು ಆಕರ್ಷಕವಾಗಿವೆ.