ಜಿಲ್ಲೆ

ಭಾಷಾಭಿಮಾನ ಬೆಳೆಸಿದ ಡಾ.ರಾಜ್​, ಸಾವಿತ್ರಿ ಮುಜುಮದಾರ ಅನಿಸಿಕೆ

ಕೊಪ್ಪಳ: ಡಾ.ರಾಜ್​ ಕುಮಾರ್​ ಕೇವಲ ಕಲಾವಿದರಾಗಿ ಅಲ್ಲದೇ ಕನ್ನಡ ಭಾಷಾ ಆರಾಧಕರಾಗಿ ಭಾಷೆ ಬೆಳೆಸಿದವರು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಡಾ.ರಾಜ್​ಕುಮಾರ್​ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್​ಕುಮಾರ್​ ಎಲ್ಲರಿಗೂ ಆದರ್ಶವಾಗಿ ಬದುಕಿದವರು. ಅವರ ಚಿತ್ರಗಳಿಂದ ಬಹುತೇಕರು ಜೀವನ ಕಟ್ಟಿಕೊಂಡಿದ್ದಾರೆ. ಅರಣ್ಯ ಸಂರಕ್ಷಣೆ ಕುರಿತು ಮೊದಲು ಚಿತ್ರ ಮೂಡಿಬಂದಿದ್ದು ಕನ್ನಡದಲ್ಲಿ. ನಟನೆ ಜತೆಎಗ ಗೋಕಾಕ್​ ಚಳವಳಿ ಮೂಲಕ ಕನ್ನಡ ನಾಡು&ನುಡಿಗಾಗಿ ಹೋರಾಡಿದರು. ನಮ್ಮ ಭಾಷೆ ಅನ್ನದ ಭಾಷೆಯಾಗಬೇಕು. ಬಹುತೇಕ ನಟರು ರಾಜಕಾರಣಕ್ಕೆ ಧುಮುಕಿದ್ದಾರೆ. ಆದರೆ, ಡಾ.ರಾಜ್​ಕುಮಾರ್​ ನಟನೆ ಬಿಟ್ಟು ಬೇರೇನೂ ಮಾಡಿಲಿಲ್ಲ. ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದರೂ ಕನ್ನಡ ಬಿಟ್ಟು ಬೇರೆ ಭಾಷಾ ಚಿತ್ರಗಳಲ್ಲಿ ನಟಿಸಲಿಲ್ಲ. ಅವರು ಕನ್ನಡದ ಆಸ್ತಿ ಎಂದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಡಾ. ರಾಜ್​ಕುಮಾರ್​ ಐದು ದಶಕ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದರು. ನಾಟಕ, ಸಿನಿಮಾಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ದಾರಿ ತಪ್ಪಿದ ಮಗ, ಬಡವರ ಬಂಧು, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿದ್ದಾರೆಂದು ಹೇಳಿದರು.

ಎಸಿ ಕ್ಯಾ.ಮಹೇಶ ಮಾಲಗಿತ್ತಿ ಡಾ.ರಾಜ್​ಕುಮಾರ್​ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಕಲಾವಿದರಾದ ಬಾಷು ಹಿರೇಮನಿ, ಚಂದನಾ ಭದ್ರಾವತಿ ಡಾ.ರಾಜ್​ ಹಾಡುಗಳನ್ನು ಹಾಡಿ ರಂಜಿಸಿದರು. ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ್​, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ನಾಗಮಣಿ, ಚುನಾವಣಾ ವಿಭಾಗದ ತಹಸೀಲ್ದಾರ್​ ರವಿ ವಸ್ತ್ರದ್​, ವಾರ್ತಾಧಿಕಾರಿ ಡಾ.ಸುರೇಶ ಜಿ., ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ ಇತರರಿದ್ದರು.