ಜಿಲ್ಲೆ

ಕೊಪ್ಪಳ ಕರ್ನಾಟಕದ ಅಕ್ಷಯ ಪಾತ್ರೆ : ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್

ಕೊಪ್ಪಳ : ಕೊಪ್ಪಳ‌ ರಾಜ್ಯದ ಅಕ್ಷಯ ಪಾತ್ರೆ. ಅನೇಕ ಹಣ್ಣು,‌ ಕೃಷಿ ಬೆಳೆಯಲಾಗುತ್ತದೆ. ಅದನ್ನು ಮೌಲ್ಯವರ್ಧಿಸಿ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ತಲಾ ಒಂದು ಕೃಷಿ ಸಂಸ್ಕರಣ ಘಟಕ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಘಟಕ ಆರಂಭಿಸಿದ್ದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತಾಲೂಕಿನ ಮೆತಗಲ್ ನಲ್ಲಿ ಸಂಸದರ ಅನುದಾನ‌ ಹಾಗೂ ನಬಾರ್ಡ್ ಸಹಯೋಗದಲ್ಲಿ ಆರಂಭಿಸಿರುವ ಕೃಷಿ ಸಂಸ್ಕರಣಾ ಘಟಕ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ರೈತರನ್ನು ರೈತ ಉದ್ಯಮಿಗಳನ್ನಾಗಿಸಬೇಕಿದೆ. ಅವರು ಬೆಳೆವ ಬೆಳೆಗೆ ಮೌಲ್ಯವರ್ಧನೆ, ಮಾರುಕಟ್ಟೆ ಸೌಲಭ್ಯ, ರಫ್ತಿಗೆ ನೆರವು ನೀಡಲು ಘಟಕ ಆರಂಭಿಸಲಾಗಿದೆ. ಈ ಬಾಗದಲ್ಲಿ ಬರ ಬಂದರೆ ಜನ ಗುಳೆ ಹೋಗುತ್ತಾರೆ. ಘಟಕ ಸದ್ಬಳಕೆ ಮಾಡಿಕೊಂಡರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಅನ್ನದಾತರ ಭವಿಷ್ಯಕ್ಕೆ ಇದೊಂದು ಮಹತ್ವದ ಹೆಜ್ಜೆ. ಕೊಪ್ಪಳದಲ್ಲಿ 840 ಟನ್ ಮಾವು, 600 ಟನ್ ಇತರ ಹಣ್ಣು ಉತ್ಪಾದನೆ ಆಗುತ್ತದೆ. ಅವುಗಳನ್ನು ಸ್ಥಳೀಯವಾಗಿ ಮೌಲ್ಯವರ್ಧಿಸಬಹುದು. ಜ್ಯೂಸ್, ಕೆಚಪ್, ಜಲ್ಲಿ, ಇನ್ನಿತರ ಆಹಾರವಾಗಿ ಬದಲಾಯಿಸಲಾಗುತ್ತದೆ. ಇಲ್ಲಿ ಉತ್ಪಾದನೆ ಆಗುವ ಆಹಾರಕ್ಕೆ ಆಹಾರ ಗುಣಮಟ್ಟ ಇಲಾಖೆ ಮಾನ್ಯತೆ ದೊರೆತಿದೆ ಎಂದರು.
ಪಿಎಂ ಮೋದಿ ವೋಕಲ್ ಫಾರ್ ಲೋಕಲ್ ಯೋಜನೆಯಡಿ ಸ್ಥಳೀಯ ಉದ್ಯಮ ಪ್ರೋತ್ಸಾಹಿಸುತ್ತಿದ್ದಾರೆ. ಅದಕ್ಕೆ ಈ ಘಟಕ ಉತ್ತಮ ಉದಾಹರಣೆ. ಕೃಷಿ ಉಪಕರಣಗಳ ಮೇಲಿನ ಜಿಎಸ್ಟಿ ಶೇ. 5ಕ್ಕೆ ಪರಿಷ್ಕರಿಸಲಾಗಿದೆ. ಕೆಲವೊಂದನ್ನು ಸಂಪೂರ್ಣ ತೆಗೆದಿದ್ದೇವೆ. ಪಿಎಂಎಫ್ ಎಂಇ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಪ್ರೋತ್ಸಾಹಿಸಲಾಗುತ್ತಿದೆ. 3,600 ಕೋಟಿ ರೂ. ಸಬ್ಸಿಡಿ ನೀಡಿದ್ದೇವೆ. ಲಕ್ಷಾಂತರ ರೈತರಿಗೆ 11ಸಾವಿರ ಕೋಟಿ ರೂ. ಸಾಲ ದೊರೆತಿದೆ. ಲಕ್ಷಕ್ಕೂ ಅಧಿಕ ರೈತರು ಉದ್ಯಮಿಗಳಾಗಿದ್ದಾರೆ‌. ವಾರದ ಹಿಂದೆ ಪಿಎಂ ಧನಧಾನ್ಯ ಯೋಜನೆ ಜಾರಿಯಾಗಿದೆ‌. 24 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು ದೇಶದ 100 ಜಿಲ್ಲೆಗಳು ಪ್ರಯೋಜನ ಪಡೆಯಲಿವೆ. ಅದರಲ್ಲಿ ಕೊಪ್ಪಳ‌ ಜಿಲ್ಲೆಯೂ ಒಂದು. ಯೋಜನೆಯಡಿ ಗುಣಮಟ್ಟದ ಬಿತ್ತನೆ ಬೀಜ, ತಂತ್ರಜ್ಞಾನ, ನೀರು ನಿರ್ವಹಣೆ ತಂತ್ರಜ್ಞಾನ ಸಿಗಲಿದೆ ಎಂದು ತಿಳಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ನಬಾರ್ಡ್ ಎಂಡಿ, ಡಿಸಿ ಡಾ.ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಇತರರಿದ್ದರು.