ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಒಂದೆಡೆ ರಸಗೊಬ್ಬರ ಕೊರತೆ ಆರೋಪಗಳಿವೆ. ಈ ನಡುವೆ ಅನ್ಯ ಜಿಲ್ಲೆಗಳಲ್ಲಿ ನಕಲಿ ರಸಗೊಬ್ಬರ ಮಾರಾಟಜಾಲ ಬೆಳಕಿಗೆ ಬಂದಿದೆ. ಅದರ ಮೂಲ ಕೊಪ್ಪಳವಾಗಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.
ಈ ವರ್ಷ ಮುಂಗಾರು ಉತ್ತಮವಾಗಿದೆ. ಜೂನ್ನಲ್ಲಿ ಮಳೆ ಕೊರೆತೆ ಕಾಡಿದರೂ ಕಳೆದೊಂದು ವಾರದಿಂದ ವರ್ಷಧಾರೆ ಆಗುತ್ತಿದೆ. ವರುಣನ ದರ್ಶನ ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಮಳೆಯಾದ ಕಾರಣ ಬೆಳೆಗಳಿಗೆ ಗೊಬ್ಬರ ಕೊಡಬೇಕಿದ್ದು, ಎಲ್ಲೆಡೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಜಿಲ್ಲಾಡಳಿತ ಮುತುವರ್ಜಿವಹಿಸಿ ಗೊಬ್ಬರ ಪೂರೈಕೆ ಮಾಡುತ್ತಿದೆ. ಆದರೆ, ರಿಟೇಲರ್, ಸೊಸೈಟಿಗಳು ಕೃತಕ ಅಭಾವ ಸೃಷ್ಟಿಸುತ್ತಿವೆ ಎಂಬುದು ರೈತರ ಆರೋಪ. 400ಕ್ಕೂ ಹೆಚ್ಚು ರಸಗೊಬ್ಬರ ಮರಾಟ ಮಳಿಗೆ, 60ಕ್ಕೂ ಹೆಚ್ಚು ಸೊಸೈಟಿಗಳಿವೆ.
ಇತ್ತೀಚೆಗೆ ಜಿಲ್ಲೆಗೆ ಪೂರೈಕೆ ಆಗುವ ರಸಗೊಬ್ಬರವನ್ನು ಅನ್ಯ ಜಿಲ್ಲೆ ಅಧಿಕಾರಿಗಳು ಕೊಂಡೊಯ್ಯುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರತೆ ಆಗುತ್ತಿದೆ ಎಂದು ರಸಗೊಬ್ಬರ ಮಾರಾಟಗಾರರ ಸಂದವರು ದೂರು ನೀಡಿದ್ದರು. ಇದರ ಬೆನ್ನಲ್ಲೇ, ಹಾವೇರಿ ಜಿಲ್ಲೆಯ ಹಾನಗಲ್, ರಾಣೆಬೆನ್ನೂರಿನಲ್ಲಿ ನಕಲಿ ರಸಗೊಬ್ಬರ ಪತ್ತೆಯಾಗಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೋಷಕಾಂಶ ಇರುವ ಗೊಬ್ಬರ ಮಾರಾಟ ಮಾಡಲಾಗಿದೆ. ಅಧಿಕಾರಿಗಳು ದಾಳಿ ನಡೆಸಿ ಪರೀಸಿದಾಗ ನಕಲಿ ಗೊಬ್ಬರವೆಂಬುದು ಪತ್ತೆಯಾಗಿದೆ. ಅದರ ಮೂಲ ಕೊಪ್ಪಳ ಎಂಬುದು ಜಿಲ್ಲೆಗೆ ಅವಮಾನಕರ ವಿಷಯ.
ಎನ್ಪಿಕೆ 17&17&17 ಹೆಸರಿನ ಗೊಬ್ಬರ ಇದಾಗಿದೆ. ಶೇ.17ರಷ್ಟು ಗುಣಮಟ್ಟ ಇರಬೇಕಿತ್ತು. ಆದರೆ, ಪ್ರಯೋಗಾಲಯ ವರದಿಯಲ್ಲಿ ಶೇ.2.4, 5.8, 2.7, 1.4ರಷ್ಟಿರುವುದು ಗೊತ್ತಾಗಿದೆ. ಎಚ್ಚೆತ್ತ ಅಲ್ಲಿನ ಅಧಿಕಾರಿಗಳು 76 ಕ್ವಿಂಟಾಲ್ನಷ್ಟು ನಕಲಿ ಗೊಬ್ಬರವನು ಸೀಜ್ ಮಾಡಿದ್ದಾರೆ. ಕೊಪ್ಪಳದ ವಿನಾಯಕ ಆಗ್ರೋ ಇಂಟಸ್ಟ್ರೀಜ್ನಿಂದ ಗೊಬ್ಬರ ಪೂರೈಕೆ ಆಗಿದೆ. ಇಬ್ಬರು ಆಗ್ರೋ ಅಂಗಡಿಯವರು ತಲಾ 5 ಟನ್ನಂತೆ ಒಟ್ಟು 10 ಟನ್ ಖರೀದಿಸಿದ್ದಾರೆ. ಬಹುತೇಕ ರೈತರಿಗೆ ಮಾರಾಟ ಮಾಡಿದ್ದು, ಕೇವಲ 76 ಕ್ವಿಂಟಾಲ್ ದೊರೆತಿದೆ. ವಿನಾಯಕ ಆಗ್ರೋ ಇಂಡಸ್ಟ್ರಿ ಕೊಪ್ಪಳ ತಾಲೂಕನ ಅಲ್ಲಾನಗರ ಬಳಿ ಕಾರ್ಯನಿರ್ವಹಿಸುತ್ತಿದೆ.
ಇದೊಂದು ಮಿಕ್ಸಿಂಗ್ ಯೂನಿಟ್ ಆಗಿದ್ದು, ವಿವಿಧ ಪೋಷಕಾಂಶಗಳನ್ನು ಪ್ರಮಾಣೀಕೃತ ಗುಣಮಟ್ಟದಲ್ಲಿ ಮಿಕ್ಸ ಮಾಡಿ ಮಾರಾಟ ಮಾಡುತ್ತಿದೆ. ಈ ವರ್ಷ 120 ಟನ್ನಷ್ಟ ಗೊಬ್ಬರ ಉತ್ಪಾದಿಸಿದ್ದು, ಹಾವೇರಿ, ಚಿತ್ರದುರ್ಗ, ದಾವಣಗೆರೆ ಇನ್ನಿತರ ಜಿಲ್ಲೆಗಳಿಗೆ ಪೂರೈಕೆ ಮಾಡಿದೆ ಎನ್ನಲಾಗುತ್ತಿದೆ. ಕೃಷಿ ಅಧಿಕಾರಿಗಳು ಕೊಪ್ಪಳದಲ್ಲಿ ಗೊಬ್ಬರ ಪೂರೈಕೆ ಆಗಿಲ್ಲ ಎನ್ನುತ್ತಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿದಲ್ಲಿ ಎಲ್ಲೆಲ್ಲಿ ಪೂರೈಕೆಯಾಗಿದೆ. ಎಷ್ಟು ವರ್ಷದಿಂದ ಕಂಪನಿ ಗೊಬ್ಬರ ಉತ್ಪಾದಿಸುತ್ತಿದೆ. ಎಲ್ಲೆಲ್ಲಿ ಪೂರೈಸಿದೆ. ಅದರ ಗುಣಮಟ್ಟ ಏನೆಂಬ ಬಗ್ಗೆ ಹಲವು ಅನುಮಾನ ಮೂಡಿಸಿದೆ.
ಕೃತಕ ಅಭಾವ ನಕಲಿಗೆ ಹಾದಿ
ಪ್ರತಿ ವರ್ಷ ಆಯಾ ಜಿಲ್ಲೆಯ ಬೇಡಿಕೆಗೆ ತಕ್ಕಷ್ಟು ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಗೆ ಸರ್ಕಾರ ಕ್ರಮವಹಿಸುತ್ತದೆ. ಆದರೆ, ಕೃಷಿ ಚಟುವಟಿಕೆಗಳು ತುರುಸು ಪಡೆದಾಗ ಕೊರತೆ ಇಲ್ಲದಿದ್ದರೂ ವ್ಯವಸ್ಥಿತವಾಗಿ ಕೃತಕ ಅಭಾವ ಸೃಷ್ಟಿ ಕಾರ್ಯ ಮುಂದುವರೆದಿದೆ. ಕೃಷಿ ಜಾಗೃತದಳ ಅಧಿಕಾರಿಗಳು ಅಲ್ಲಲ್ಲಿ ದಾಳಿ ನಡೆಸಿ ಕ್ರಮ ಜರುಗಿಸಿದರೂ ಶಾಶ್ವತ ಕಡಿವಾಣ ಬೀಳುತ್ತಿಲ್ಲ. ಕೃತಕ ಅಭಾವ ಹೆಚ್ಚಿದಾಗ ರೈತರು ತಮ್ಮ ಪ್ರದೇಶ ಬಿಟ್ಟು ಇತರೆಡೆ ಗೊಬ್ಬರ ಇರುವ ಬಗ್ಗೆ ಮಾಹಿತಿ ಬಂದಲ್ಲಿ ಅವಸರದಲ್ಲಿ ಗುಣಮಟ್ಟ, ಬಿಲ್ ಇನ್ನಿತರ ಸುರಾ ಕ್ರಮ ವಹಿಸದೆ ಗೊಬ್ಬರ ಖರೀದಿಸುತ್ತಾರೆ. ಪರಿಸ್ಥಿತಿ ಲಾಭ ಪಡೆವ ವ್ಯವಸ್ಥಿತ ಜಾಲ ನಕಲಿ ಗೊಬ್ಬರ ಪೂರೈಕೆ ಮಾಡುತ್ತದೆ ಎಂಬ ಆರೋಪಗಳಿವೆ.