ಕೊಪ್ಪಳ: ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಸಿಂಧನೂರು ತಾಲೂಕಿನ ದಢೇಸುಗೂರು ಗ್ರಾಮದಲ್ಲಿ ಸ್ವ ಸಮುದಾಯದ ವಿಮುಕ್ತ ದೇವದಾಸಿ ಮಹಿಳೆಯರ ಜಮೀನುಗಳನ್ನು ಮೋಸದಿಂದ ಕಬಳಿಸಿದ್ದಾರೆಂದು ಪ್ರಜಾ ಜಾಗೃತಿ ಸಂಟನೆ ಅಧ್ಯಕ್ಷ, ವಕೀಲ ಎಚ್.ಜಗದೀಶ ಆರೋಪಿಸಿದರು.
ದೇವದಾಸಿಯರ ಪುನರ್ವಸತಿ ಯೋಜನೆಯಡಿ ಗ್ರಾಮದ ದೇವದಾಸಿಯರಿಗೆ ತಲಾ 3 ಎಕರೆಯಂತೆ ಸರ್ಕಾರ 1990&91ರಲ್ಲಿ ಭೂಮಿ ಹಂಚಿಕೆ ಮಾಡಿದೆ. 2011&12ರಲ್ಲಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಮಹಿಳೆಯರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ನಂಬಿಸಿದ್ದಾರೆ. ಅದಕ್ಕಾಗಿ ನಿಮ್ಮ ಒಪ್ಪಿಗೆ ಬೇಕೆಂದು ಸಹಿ ಮಾಡಿಸಿಕೊಂಡು ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ನೊಂದವರ ಪೈಕಿ ಒಬ್ಬರು ಈಗಾಗಲೇ ಬಸವರಾಜ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾನೂನು ಪ್ರಕಾರ ಪುನರ್ವಸತಿಗೆ ನೀಡಿದ ಜಮೀನು ಪರಭಾರೆ ಮಾಡಬಾರದು. ಎಸ್ಸಿ&ಎಸ್ಟಿಗಳನ್ನು ಭೂರಹಿತರನ್ನಾಗಿ ಮಾಡುವಂತಿಲ್ಲ. ಆದರೆ, ಸರ್ಕಾರದ ನೀರಾವರಿ ಯೋಜನೆಯನ್ನು ತಾನು ಮಾಡಿಸುವುದಾಗಿ ಹೇಳಿದ್ದಲ್ಲದೆ, ಅಮಾಯಕರ ಜಮೀನು ಕಸಿದಿದ್ದಾರೆ. ಕಾನೂನಾತ್ಮಕವಾಗಿಯೇ ಜಮೀನು ಪಡೆದಿದ್ದಾಗಿ ತಪು$್ಪ ಮಾಹಿತಿ ನೀಡುತ್ತಿದ್ದಾರೆ. ಸರ್ಕಾರದಿಂದ ಭೂಮಿ ಮಾರಾಟಕ್ಕೆ ಯಾವ ಅನುಮತಿ ದೊರೆತಿಲ್ಲ. ಸರ್ವೇ ನಂಬರ್ 81ರಲ್ಲಿ 26.25 ಎಕರೆ, 84ರಲ್ಲಿ 32.17 ಎಕರೆ ಜಮೀನು ಕಬಳಿಸಿದ್ದಾರೆ. ಇಷ್ಟಲ್ಲದೇ, ಸ.ನಂ; 51/ಪಿ1ರಲ್ಲಿನ ಸರ್ಕಾರಿ ಖಾರೀಜ ಖಾತೆಯಲ್ಲಿನ 30 ಎಕರೆ ಭೂ ಒತ್ತುವರಿ ಮಾಡಿದ್ದಾರೆಂದು ದಾಖಲೆ ಪ್ರದರ್ಶಿಸಿದರು. ತಮ್ಮ ಕುಟುಂಬದವರ ಹೆಸರಿನಲ್ಲಿ ಅಲ್ಲದೇ, ಪರಿಚಿತರಿಂದ ಕೆಲ ಭೂಮಿ ಖರೀದಿಸಿದ್ದಾರೆಂದು ದೂರಿದರು.
ವಿಮುಕ್ತ ದೇವದಾಸಿಯರಾದ ಗಂಗಮ್ಮ ದಢೇಸುಗೂರು, ಅಲಮೇಲಮ್ಮ, ಕನಕಮ್ಮ ಇತರರು ತಮಗಾದ ಅನ್ಯಾಯ ತೋಡಿಕೊಂಡರು. ದಲಿತ ಮುಖಂಡರಾದ ಬಸವರಾಜ ಕರ್ನಿ, ಜಾನಪ್ಪ ಜವಳಗೇರಾ, ಶ್ರೀನಿವಾಸ ವೈ. ಇತರರಿದ್ದರು.