ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವಾಗಲೇ ಮುಸ್ಲಿಮರು ಕೆಲಸ ಮಾಡಿಕೊಳ್ಳಬೇಕು. ಅವರು ಹೋದ ನಂತರ ನಮಗೆಲ್ಲ ಚೊಂಬೆ ಗತಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಮುಸ್ಲಿಮ್ ಯುವ ಸಮಿತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವ ತನಕ ಪ್ರತಿ ಆರು ತಿಂಗಳಿಗೊಮ್ಮೆ 100 ಕೋಟಿ ಅನುದಾನ ತರಬೇಕು. ತಂದು ಮುಸ್ಲಿಮ್ ಸಮುದಾಯ ಕೆಲಸ ಮಾಡಿಕೊಳ್ಳಬೇಕು. ಅವರ ನಂತರ ಮುಸ್ಲಿಮರಿಗೆಲ್ಲ ಚೊಂಬೆ ಗತಿ. ಅವರಿಂದಲೇ ನಾನು ಶಾಸಕ, ಸಚಿವನಾದೆ. ನನ್ನ ನಾಯಕ ಸಿದ್ದರಾಮಯ್ಯ. ರಾಹುಲ್, ಸೋನಿಯಾ ಗಾಂಧಿಯನ್ನು ನಾನು ನಾಯಕರೆಂದು ಒಪ್ಪಿಕೊಂಡಿಲ್ಲ ಎಂದರು.
ಬಿಜೆಪಿ ಶಾಸಕ ಯತ್ನಾಳ್ ಸಿಎಂ ಹಾಗೂ ಸಚಿವ ಜಮೀರ್ ಖಾನ್ ರೈತರಿಗೆ ವಕ್ಫ್ ಹೆಸರಿನಲ್ಲಿ ನೋಟಿಸ್ ಕೊಡುತ್ತಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ವಕ್ಫ್ ಆಸ್ತಿಗಳಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಅವು ವಕ್ಫ್ ಭೂಮಿ. ರಾಜ್ಯದ ಮುಸ್ಲಿಮರು ಯಾವತ್ತೂ ಶತೃ ರಾಷ್ಟ್ರದ ಪರ ಇಲ್ಲ. ನಾವು ಇಲ್ಲೇ ಹುಟ್ಟಿದ್ದೇವೆ. ಇಲ್ಲಿಯೇ ಸಾಯುತ್ತೇವೆ. ಆದರೆ, ಯತ್ನಾಳ್ ಮತ್ತೊಂದು ಪಾಕಿಸ್ತಾನ ಮಾಡುತ್ತಾರೆಂದು ವಿಷ ಬೀಜ ಬಿತ್ತುತ್ತಿದ್ದಾರೆಂದು ಕಿಡಿಕಾರಿದರು.