ಜಿಲ್ಲೆ

ಶ್ರಮಿಕರಿಂದ ಭೂಮಿ ಉಳಿವು, ನ್ಯಾಯಾಧೀಶ ಮಹಾಂತೇಶ ದರಗದ ಹೇಳಿಕೆ

ಕೊಪ್ಪಳ: ಶ್ರಮಿಕ ವರ್ಗದವರಿಂದ ಮಾತ್ರ ಭೂಮಿ ಉಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್​ ಎಸ್​. ದರಗದ ಹೇಳಿದರು.

ತಾಲೂಕಿನ ಲೇಬಗೇರಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೂಮಿ ಉಳಿದರೆ ನಾವೆಲ್ಲ ಬದುಕುತ್ತೇವೆ. ಭೂಮಿ ನಮಗೆಲ್ಲ ತಾಯಿ ಸ್ವರೂಪ. ಅದನ್ನು ಕಲುಷಿತಗೊಳಿಸದಂತೆ ಕಾಪಾಡಬೇಕು. ಸಮತೋಲನ ಕಾಪಾಡಬೇಕು. ಸಾಲುಮರದ ತಿಮ್ಮಕ್ಕ ಸಸಿ ನೆಟ್ಟು ಮಕ್ಕಳಂತೆ ಮರಗಳನ್ನು ಬೆಳೆಸಿದರು. ಭೂಮಿ ಅಸಮತೋಲನದಿಂದಲೇ ಇಂದು ಅನೇಕ ವಿಕೋಪಗಳು ಸಂಭವಿಸುತ್ತಿವೆ. ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಹಾಳು ಮಾಡುತ್ತಿದ್ದೇವೆ. ಶ್ರಮಿಕರು ಭೂತಾಯಿಯನ್ನು ಕಾಪಾಡುತ್ತಿದ್ದಾರೆ. ನಮ್ಮ ಹಿರಿಯರು ಬೆಳಗೆದ್ದು ಭೂ ತಾಯಿಯನ್ನು ನೆನೆದು ದಿನಚರಿ ಆರಂಭಿಸುತ್ತಿದ್ದರು. ಅದನ್ನು ನಾವೆಲ್ಲ ನೆನೆಯಬೇಕೆಂದು ಕರೆ ನೀಡಿದರು.

ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಮಾತನಾಡಿ, ರೈತರು ಭೂ ತಾಯಿಯೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಂತೆ ನಾವು ಭೂಮಿಗೆ ಆದ್ಯತೆ ನೀಡಬೇಕೆಂದರು.

ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಭೂ ರಕ್ಷಣೆಗೆ ಆದ್ಯತೆ ನೀಡಬೇಕು. ಭೂಮಿ ಆರೋಗ್ಯವಾಗಿದ್ದರೆ ನಾವೆಲ್ಲ ಬದುಕಬಹುದೆಂದರು.

ಗಣ್ಯರು ಗಿಡ ನೆಟ್ಟರು. ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಪಂ ಅಧ್ಯೆ ದೇವಮ್ಮ ಮಹಾದೇವಪ್ಪ ಕುರಿ, ಸಹಾಯಕ ನಿರ್ದೇಶಕ ಮಹೇಶ್​, ಗ್ರಾಪಂ ಸದಸ್ಯರಾದ ಫಕೀರಗೌಡ ಗೌಡ್ರ, ನಾಗಪ್ಪ ದೊಡ್ಡಮನಿ, ಬಸವರಾಜ ಯತ್ನಟ್ಟಿ, ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಿಡಿಒ ಸಂಗಮೇಶ ತೇರಿನ, ಕಾರ್ಯದರ್ಶಿ ಪೂರ್ಣೇಂದ್ರಸ್ವಾಮಿ ಇತರರಿದ್ದರು.