ಕೊಪ್ಪಳ: ವೈದ್ಯ ವೃತ್ತಿ ಪವಿತ್ರವಾದದ್ದು. ಸಮಸ್ಯೆ ಹೊತ್ತು ಬರುವ ರೋಗಿಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡಬೇಕು. ಸೌಜನ್ಯದಿಂದ ವರ್ತಿಬಸೇಕು ಎಂದು ಹಿರಿಯ ವೈದ್ಯ ಡಾ.ಕೆ.ಜಿ.ಕುಲಕರ್ಣಿ ಹೇಳಿದರು.
ನಗರದ ಕೆ.ಎಸ್.ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವೀಯ ಗುಣ ಅಳವಡಿಸಿಕೊಳ್ಳಬೇಕು. ಸಮಯ ಪಾಲನೆ, ಕರ್ತವ್ಯ ಅವಧಿಯಲ್ಲಿ ಆಸ್ಪತ್ರೆಯಲ್ಲಿರಬೇಕು. ರೋಗಿಗಳೊಡನೆ ಉತ್ತಮ ಸಂವಹನ ನಡೆಸಬೇಕು. ಜತೆಗೆ ನಮ್ಮ ಕುಟುಂಬದ ಆರೋಗ್ಯದೆಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.
ಡಾ.ಎಸ್.ಬಿ.ದಾನರಡ್ಡಿ ಮಾತನಾಡಿ, ವೃತ್ತಿಗೌರವ ಕಾಪಾಡಬೇಕು. ರೋಗಿಗಳು ಮತ್ತವರ ಕಡೆಯವರಿಗೆ ಸ್ಪಂದಿಸಬೇಕು. ರೋಗ, ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಬೇಕು. ವಿಶ್ವಾಸ ಮೂಡಿಸುವಂತೆ ವರ್ತಿಸಿದಲ್ಲಿ ರೋಗಿ ಬೇಗ ಗುಣವಾಗುತ್ತಾನೆಂದು ಅನುಭವ ಹಂಚಿಕೊಂಡರು.
ಹೋಂ ಕೇರ್ ಸರ್ವಿಸ್ ಸೇವೆಗೆ ಚಾಲನೆ ನೀಡಲಾಯಿತು. ವೈದ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್, ಡಾ.ಪ್ರವಿಣ್ ಇತರರಿದ್ದರು.