ವಿಜಯವಾಣಿ ವಿಶೇಷ ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕಿಯ ಸೇವೆ ಒದಗಿಸುವ ದೃಷ್ಟಿಯಿಂದ ಸರ್ಕಾರ ಜಾರಿ ಮಾಡಿರುವ ಟೆಲಿ ಕನ್ಸಲ್ಟೇಷನ್ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ರಾಜ್ಯಮಟ್ಟದಲ್ಲಿ ಕೊಪ್ಪಳ ಟಾಪ್ ಸ್ಥಾನ ಪಡೆದಿದ್ದು ಗರಿಮೆ ಹೆಚ್ಚಿಸುವಂತೆ ಮಾಡಿದೆ.
ಕರೋನಾ ಬಳಿಕ ಎಲ್ಲ ರಂಗಗಳಲ್ಲಿ ಟೆಕ್ನಾಲಜಿ ಬಳಕೆ ದ್ವಿಗುಣಗೊಂಡಿದೆ. ಡಿಜಿಟಲೀಕರಣಕ್ಕೆ ಆದ್ಯತೆ ದೊರೆತಿದೆ. ಆರೋಗ್ಯದಲ್ಲೂ ಮಹತ್ತರ ಬದಲಾವಣೆಗಳಾಗಿವೆ. ಇ ಸಂಜೀವಿನಿ ಯೋಜನೆ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ವೈದ್ಯಕಿಯ ಸೇವೆಗಳನ್ನು ಡಿಜಿಟಲ್ಗೊಳಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗಳು ಡಿಜಿಟಲೀಕರಣಗೊಳ್ಳುತ್ತಿವೆ. ಡಿಜಿಟಲ್ ಹೆಲ್ತ್ ಮ್ಯಾರಾಥಾನ್ನಲ್ಲೂ ಕೊಪ್ಪಳ ಜಿಲ್ಲೆ ರಾಷ್ಟ್ರಮಟ್ಟದ ಗಮನ ಸೆಳೆದಿರುವುದು ವಿಶೇಷ.
ಗ್ರಾಮೀಣ ಭಾಗಗಳಲ್ಲಿ ಖಾಸಗಿ ವೈದ್ಯಕಿಯ ಸೇವೆಗಳು ಸಿಗುವುದು ಅಷ್ಟಕ್ಕಷ್ಟೆ. ಹಳ್ಳಿ ಜನರಿಗೆ ಆರೋಗ್ಯ ಸಮಸ್ಯೆಗಳಾದಲ್ಲಿ ಮೊದಲಿಗೆ ನೆರವಿಗೆ ಬರುವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳು. ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ಉಪ ಆರೋಗ್ಯ ಕೇಂದ್ರಗಳು ನಡೆಯುತ್ತಿವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಗ್ರಾಮೀಣ ಹಂತದಲ್ಲೇ ಚಿಕಿತ್ಸೆ ಹಾಗೂ ಔಷಧ ನೀಡಲಾಗುತ್ತಿದೆ. ಗ್ರಾಮೀಣರು ತಜ್ಞ ವೈದ್ಯರನ್ನು ಸಂಪರ್ಕಿಸಬೇಕೆಂದರೆ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆ, ವೈದ್ಯಕಿಯ ವಿಜ್ಞಾನ ಸಂಸ್ಥೆಗಳಿಗೆ ಬರಬೇಕು.
ಬಂದರೂ ವೈದ್ಯರು ಯಾವ ಅಧಿಯಲ್ಲಿರುತ್ತಾರೆ, ಎಲ್ಲಿ ಹೋಗಬೇಕು, ಸಂಪರ್ಕ ಎಂದೆಲ್ಲ ಹಲವು ಸಮಸ್ಯೆಗಳಿವೆ. ಇದನ್ನು ತಪ್ಪಿಸಿ ಗ್ರಾಮೀಣ ಭಾಗದಿಂದಲೇ ಜನರಿಗೆ ತಜ್ಞ ವೈದ್ಯರ ಸೇವೆ ದೊರಕಿಸಿಕೊಡಲಾಗುತ್ತಿದೆ. ಈ ಸಂಜೀವಿನ ಆ್ಯಪ್ ಮೂಲಕ ಇದನ್ನು ಅನುಷ್ಠಾನಗೊಳಿಸುತ್ತಿದ್ದು, ಪರಿಣಾಮಕಾರಿಯಾಗಿದೆ. ನಿತ್ಯ ತಜ್ಞ ವೈದ್ಯರು ಆ್ಯಪ್ ಮೂಲಕ ಲಾಗಿನ್ ಆಗುತ್ತಾರೆ. ಅವರ ಹೆಸರು, ವಿಭಾಗ ಸಹಿತ ವಿವರಗಳು ದೊರೆಯಲಿವೆ. ಆ್ಯಪ್ ಬಳಸಿ ರೋಗಿಯೇ ನೇರವಾಗಿ ವೈದ್ಯರನ್ನು ಸಂದರ್ಶಿಸಬಹುದು. ರೋಗ ಲಕ್ಷಣ ತಿಳಿಸಿ ಔಷಧ ವಿವರ ಪಡೆಯಬಹುದು.
ವೈದ್ಯರ ಸಹಿಯೊಂದಿಗೆ ಔಷಧ ಚೀಟಿ ಬರಲಿದ್ದು, ಅದನ್ನು ಡೌನ್ಲೋಡ್ ಮಾಡಿಕೊಂಡು ಔಷಧ ಅಂಗಡಿಗಳಲ್ಲಿ ಔಷಧ ಪಡೆಯಬುಹುದು. ವೈದ್ಯರಿಂದ ವಿತರಿಸಿರುವ ಕಾರಣ ಔಷಧ ಪಡೆದುಕೊಳ್ಳಲು ಯಾವುದೇ ಅಡ್ಡಿಉಂಟಾಗುವುದಿಲ್ಲ. ಇನ್ನು ಉಪ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು ತಮ್ಮ ಬಳಿಗೆ ಬರುವ ರೋಗಿಗಳಿಗೆ ಆ್ಯಪ್ ಮೂಲಕ ತಜ್ಞ ವೈದ್ಯರ ಸಲಹೆ ಕೊಡಿಸುತ್ತಿದ್ದಾರೆ. ಪಡೆಯಬೇಕಾದ ಔಷಧ ವಿವರ ದಾಖಲಿಸಿಕೊಂಡು ಔಷಧ ವಿತರಣೆ ಮಾಡಲಾಗುತ್ತಿದೆ.
ಇದರಿಂದ ಜನರು ತಜ್ಞ ವೈದ್ಯರನ್ನು ಅರಸಿ ದೂರದೂರಿಗೆ ಓಡಾಡುವುದು ತಪು$್ಪತ್ತಿದೆ. ಜತೆಗೆ ಸಮಯ ಉಳಿತಾಯವಾಗುತ್ತಿದ್ದು, ಡಿಜಿಟಲ್ ವ್ಯವಹಾರ ಮೂಲಕವೇ ಎಲ್ಲ ಕೆಲಸಗಳು ನಡೆಯುತ್ತಿದ್ದು, ಸಾಕಷ್ಟು ಅನುಕೂಲತೆ ಕಲ್ಪಿಸಿದೆ. ಹೊರ ರೋಗಿಗಳಿಗೆ ಈ ಸೇವೆ ಲಭ್ಯವಿದ್ದು ಪಡೆದುಕೊಳ್ಳಬಹುದು. ವೈದ್ಯರು ಲಭ್ಯವಿರುವ ಅವಧಿ, ದಿನಾಂಕ ಸಹಿತ ವಿವರಗಳು ಸಿಗಲಿದ್ದು, ಸಂಪರ್ಕಿಸಲು ಪರದಾಡುವುದು ತಪ್ಪಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಉಪ ಆರೋಗ್ಯ ಕೇಂದ್ರಗಳು, 48 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 9 ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ರಾಜ್ಯಕ್ಕೆ ಜಿಲ್ಲೆ ಪ್ರಥಮ
ಟೆಲಿ ಕನ್ಸಲ್ಟೇಷನ್ ಪರಿಣಾಮಕಾರಿ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಆದ್ಯತೆ ನೀಡಿದೆ. ಉಪ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿತ್ಯ ತಲಾ ಐವರು ರೋಗಿಗಳಿಗಾದರೂ ಟೆಲಿ ಕನ್ಸಲ್ಟೇಷನ್ ಕೊಡಿಸುವಂತೆ ನಿರ್ದೇಶಿಸಿದೆ. ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳು ಪರಿಣಾಮಕಾರಿಯಾರಿ ಬಳಕೆ ಮಾಡುತ್ತಿದ್ದಾರೆ. ಇಲಾಖೆ ಪ್ರತಿ ತಿಂಗಳು ಪ್ರಗತಿ ವರದಿ ಪಡೆಯುತ್ತಿದ್ದು, ರಾಜ್ಯದಲ್ಲಿ ಕೊಪ್ಪಳದಲ್ಲೇ ಹೆಚ್ಚು ಬಳಕೆ ಆಗುತ್ತಿದೆ. ಕಳೆದ ಮೂರು ತಿಂಗಳಲ್ಲೂ ಕೊಪ್ಪಳ ಶೇ.85ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ.
ಕರೊನಾ ನಂತರದಲ್ಲಿ ಆರೋಗ್ಯ ರಂಗ ಡಿಜಿಟಲೀಕರಣದತ್ತ ಹೊರಳುತ್ತಿದೆ. ಇ ಸಂಜೀವಿನಿ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಡಿಜಿಟಲ್ ಹೆಲ್ತ್ ಮ್ಯಾರಾಥಾನ್, ಟೆಲಿ ಕನ್ಸಲ್ಟೆಷನ್ ಸೇವೆ ನೀಡಲಾಗುತ್ತಿದೆ. ಉಪ ಆರೋಗ್ಯ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದವರಿಗೆ ಅವರಿರುವಲ್ಲಿಯೇ ತಜ್ಞ ವೈದ್ಯರಿಂದ ಚಿಕಿತ್ಸೆ ಸಲಹೆ, ಔಷಧ ವಿತರಣೆ ಮಾಡಲಾಗುತ್ತಿದೆ. ಆನ್ಲೈನ್ ಸೇವೆಯಾಗಿದ್ದು, ವೈದ್ಯರು ಲಾಗಿನ್ ಆಗಲಿದ್ದಾರೆ. ಯಾವ ವೈದ್ಯರು ಇದ್ದಾರೆಂದು ತಿಳಿಯಬಹುದು. ರೋಗಿಯ ಅಗತ್ಯಕ್ಕೆ ತಕ್ಕಂತೆ ವೈದ್ಯರನ್ನು ಸಂದರ್ಶಿಸಿ ಔಷಧೋಪಚಾರ ಪಡೆಯಬಹುದು. ಡಾ.ಪ್ರಕಾಶ ಎಚ್. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಕೊಪ್ಪಳ.ಡಾ.ಪ್ರಕಾಶ ಎಚ್. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಕೊಪ್ಪಳ.
ಆರೋಗ್ಯ ರಂಗ ಡಿಜಿಟಲ್ ಆಗುತ್ತಿದೆ. ಆನ್ಲೈನ್ ಸೇವೆಗಳಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತಿದೆ. ವೈದ್ಯರು ತಾವಿರುವ ಸ್ಥಳದಿಂದಲೇ ಸುಲಭವಾಗಿ ರೋಗಿಗಳನ್ನು ಸಂದರ್ಶಿಸಬಹುದು. ಜಿಲ್ಲೆಯಲ್ಲಿ ಆನ್ಲೈನ್ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಡಾ.ಟಿ.ಲಿಂಗರಾಜು. ಡಿಎಚ್ಒ ಕೊಪ್ಪಳ.ಡಾ.ಟಿ.ಲಿಂಗರಾಜು. ಡಿಎಚ್ಒ ಕೊಪ್ಪಳ.