ಕೊಪ್ಪಳ: ಡೆಂಘೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಎಲ್ಲರೂ ಸಹಕರಿಸಬೇಕೆಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಲಾರ್ವಾ ಮೀನುಗಳನ್ನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶಕ್ಕೆ ಪ್ರತಿ ಶುಕ್ರವಾರ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸಮರ್ಪಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿ. ಡೆಂಘೆ ಜ್ವರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ. ಈ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಿ. ಅಗತ್ಯ ಸುರಾ ಕ್ರಮಗಳನ್ನು ಅನುಸರಿಸಲು ಮನವಿ ಮಾಡುವಂತೆ ಸಲಹೆ ನೀಡಿದರು.
ಡಿಎಚ್ಒ ಡಾ.ಟಿ.ಲಿಂಗರಾಜು ಮಾತನಾಡಿ, ಡೆಂಘೆ ಜ್ವರಕ್ಕೆ ಪ್ರಮುಖ ಕಾರಣವಾದ ಈಡಿಸ್ ಸೊಳ್ಳೆಗಳ ನಿಯಂತ್ರಣ ಮಾಡಬೇಕಿದೆ. ಜಿಲ್ಲೆಯಲ್ಲಿರುವ ದೊಡ್ಡ ದೋಣಿಗಳು, ಕಲ್ಲು ಕ್ವಾರಿಗಳು, ಹೊಂಡಗಳು ಮತ್ತು ಮಳೆ ನೀರು ಸಂಗ್ರಹವಾಗುವ ಇತರ ಸ್ಥಳಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತಿದೆ. ಈ ಲಾರ್ವಾಹಾರಿ ಮೀನುಗಳು ಈಡಿಸ್ ಸೊಳ್ಳೆಗಳ ಮೊಟ್ಟೆಗಳನ್ನು ತಿಂದು ಅವುಗಳ ಸಂತಾನೋತ್ಪತ್ತಿಯನ್ನು ನಾಶ ಮಾಡುತ್ತವೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ ಕೆ. ಮಾತನಾಡಿ, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳಿಂದ ಡೆಂಘೆ ಹರಡುತ್ತದೆ. ಸಾರ್ವಜನಿಕರು ಮನೆಯಲ್ಲಿರುವ ಸಿಮೆಂಟ್ ತೊಟ್ಟಿ, ಡ್ರಂ, ಬ್ಯಾರೆಲ್, ಬಕೆಟ್ ಹಾಗೂ ಕೊಡಗಳಲ್ಲಿ ಅನಗತ್ಯ ನೀರು ಸಂಗಹ್ರವಾಗದಂತೆ ನೋಡಿಕೊಳ್ಳಿ. ಸ್ವಚ್ಛಗೊಳಿಸಿ ಮುಚ್ಚಿಡಿ. ವಾರಕ್ಕೊಮ್ಮೆಯಾದರೂ ಸ್ವಚ್ಛ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಟಿಎಚ್ಒ ಡಾ.ರಾಮಾಂಜನೇಯ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ಪೂಜಾರ, ರಮೇಶ್ ಸೆರಿ ಇತರರಿದ್ದರು.