ಕೊಪ್ಪಳ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಗರ ಸೇರಿ ಜಿಲ್ಲಾದ್ಯಂತ ಗುರುವಾರ ಸಾರ್ವನಿಕರು ಹಬ್ಬದ ಖರೀದಿಯಲ್ಲಿ ತೊಡಗಿದರು. ಈ ವರ್ಷ ಉತ್ತಮ ಮಳೆಯಾಗಿದ್ದು, ಬೆಲೆ ಏರಿಕೆ ಬಿಸಿ ನಡುವೆಯೂ ಸಡಗರ ಮೈತುಂಬಿಕೊಂಡಿದೆ.
ಮೂರು ದಿನಗಳ ಕಾಲ ನಡೆವ ಹಬ್ಬ ಹಿನ್ನೆಲೆಯಲ್ಲಿ ಬುಧವಾರ ಹಿರಿಯರ ಹಬ್ಬಾಚರಣೆ ನಡೆಯಿತು. ಮನೆ ಮನೆಯಲ್ಲಿ ತಮ್ಮ ಹಿರಿಯರನ್ನು ನೆನದು ಪೂಜೆ ಸಲ್ಲಿಸಿದರು. ಗುರುವಾರ ಮತ್ತು ಶುಕ್ರವಾರ ಎರಡು ದಿನ ಅಮವಾಸ್ಯೆ ಇರುವ ಕಾರಣ ಹಬ್ಬಾಚರಣೆ ಶನಿವಾರದವರೆಗೆ ನಡೆಯಲಿದೆ. ಈ ವರ್ಷ ನಿರೀತ ಮಳೆಯಾಗಿದ್ದು, ರೈತಾಪಿ ವರ್ಗದಲ್ಲಿ ಹರ್ಷ ಮನೆ ಮಾಡಿದೆ. ಹಿಂಗಾರಿನಲ್ಲಿ ವಾರ ಕಾಲ ಸುರಿದ ಮಳೆ ಕಟಾವು ಕಾರ್ಯಗಳಿಗೆ ಅಡಚಣೆ ಒಡ್ಡಿದರೂ ಅಷ್ಟಾಗಿ ಖುಷಿ ಕಸಿದಿಲ್ಲ. ಮಾರುಕಟ್ಟೆಯಲ್ಲಿ ಹೂ, ಹಣ್ಣು ಹಾಗೂ ಇತರ ಹಬ್ಬದ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ. ಬೆಲೆಯೂ ಗಗನಕ್ಕೇರಿದ್ದು ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರವೇ ತಾತ್ಕಾಲಿಕ ಮಾರುಕಟ್ಟೆ ತೆರೆಯಲಾಗಿದೆ. ಮಧ್ಯಾಹ್ನದಿಂದಲೇ ಜನರು ಕುಂಬಳ ಕಾಯಿ, ಹೂ, ಹಣ್ಣು, ಬಾಳೆದಿಂಡು, ಕಬ್ಬು, ಮಾವಿನ ಎಲೆ, ಪಟಾಕಿ ಖರೀದಿ ಆರಂಭಿಸಿದರು. ದಿನಸಿ ದರಗಳು ದುಪ್ಪಟ್ಟಾಗಿದ್ದು, ಚೌಕಾಸಿ ಮಾಡುತ್ತಲೇ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬ ಅಂಗವಾಗಿ ವಾಹನ ಖರೀದಿಯೂ ಹೆಚ್ಚಿದ್ದು, ಬೈಕ್, ಕಾರ್ ಶೋ ರೂಂಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.
ಕೊಪ್ಪಳದ ಬಸ್ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ಮೈದಾನದಲ್ಲಿ ಜನಜಂಗುಳಿ ಕಾರಣ ಟ್ರಾಫಿಕ್ ಸಮಸ್ಯೆ ಬೆಳಗ್ಗೆಯಿಂದಲೇ ಕಾಣಿಸಿಕೊಂಡಿತು. ರಸ್ತೆ ಬಿಟ್ಟು ವ್ಯಾಪಾರ ಮಾಡುವಂತೆ, ವಾಹನ ಪಾಕ್ ಮಾಡುವಂತೆ ಸಾರ್ವಜನಿಕರಿಗೆ ಪದೇ ಪದೆ ತಾಕೀತು ಮಾಡಿ ಪೊಲೀಸರು ಹೈರಾಣಾದರು.
ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಶಾಂತಿಯುತ ಹಬ್ಬ ಆಚರಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಂಚಾರ ದಟ್ಟಣೆ ಹೆಚ್ಚದಂತೆ ಟ್ರಾಫಿಕ್ ನಿಯಂತ್ರಣ ಮಾಡಿದ್ದು ಕಂಡುಬಂತು.