ಜಿಲ್ಲೆ

ಕಾಮಗಾರಿ ಆರಂಭಿಸಿದ ಅಧಿಕಾರಿಗಳು

ಕೊಪ್ಪಳ: ತಾಲೂಕಿನ ಟಣಕನಕಲ್​ ಬಳಿ ನಿರ್ಮಿಸುತ್ತಿರುವ ಸರ್ಕಾರಿ ಬಾಲಕರ ಬಾಲ ಮಂದಿರ ಕಾಮಗಾರಿಯನ್ನು ನಿರ್ಮಿತಿ ಅಧಿಕಾರಿಗಳು ಆರಂಭಿಸಿದ್ದಾರೆ. ಇನ್ನು ಕೆಲವು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಭರವಸೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಟಕದಡಿ ಬಾಲಕ, ಬಾಲಕಿಯರ ಬಾಲ ಮಂದಿರಗಳು ನಿರ್ವಹಣೆಯಾಗುತ್ತಿವೆ. ಇವರೆಗೆ ಸ್ವಂತ ಕಟ್ಟಡ ಹೊಂದಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಚಿವರಾಗಿದ್ದ ಹಾಲಪ್ಪ ಆಚಾರ್​ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಹಂಚಿಕೆ ಮಾಡಲಾಗಿದೆ. ಕುಂಡು ನೆಪ ತೆಗೆದ ಅಧಿಕಾರಿಗಳು ವರ್ಷಗಳು ಉರುಳಿದರೂ ಬುನಾದಿ ಹಂತಕ್ಕೆ ಕಾಮಗಾರಿ ಕೈ ಬಿಟ್ಟಿದ್ದಾರೆ.

ಈ ಬಗ್ಗೆ ವಿಜಯವಾಣಿ ಸತತ ವರದಿ ಮಾಡಿ ಬೆಳಕು ಚೆಲ್ಲಿದೆ. ಈ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ ನೀಡಿ ಕಾಮಗಾರಿ ಆರಂಭಕ್ಕೆ ಸೂಚಿಸಿದ್ದರು. ಇಷ್ಟಾದರೂ ಮೊಂಡುತನ ಪ್ರದರ್ಶಿಸಿದ ಅಧಿಕಾರಿಗಳು ಕಾಮಗಾರಿ ನಡೆಸಲು ಪೊಲೀಸ್​ ರಕ್ಷಣೆ ಕೋರಿ ಎಸ್ಪಿಗೆ ಮನವಿ ಸಲ್ಲಿಸಿ ಸುಮ್ಮನಾಗಿದ್ದರು. ಅಧಿಕಾರಿಗಳ ರ್ನಿಲಕ್ಷ$್ಯ ಕುರಿತು ವಿಜಯವಾಣಿಯಲ್ಲಿ ಜು.13ರಂದು "ಕಟ್ಟಡ ನಿರ್ಮಾಣಕ್ಕೆ ಪೊಲೀಸ್​ ರಕ್ಷಣೆ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ವರದಿ ಬೆನ್ನಲ್ಲೆ ನಿರ್ಮಿತಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ತಕ್ಷಣ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ತಾಕೀತು ಮಾಡಿದರು. ಎಚ್ಚೆತ್ತ ನಿರ್ಮಿತಿ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದಾರೆ.