ಜಿಲ್ಲೆ

ಶಿಶು ಕಲ್ಯಾಣ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಲು ಡಿಸಿ ಸೂಚನೆ

ಕೊಪ್ಪಳ: ಅಂಗವಿಕಲ, ಶಿಶುಕಲ್ಯಾಣ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಎಸ್ಸಿಪಿ&ಟಿಎಸ್​ಪಿ ಯೋಜನೆ ಮೂಲ ಆಶಯದಂತೆ ಯೋಜನೆ ಅನುಷ್ಠಾನ ಮಾಡಿ. ಮಾನದಂಡಗಳ ಅನುಸಾರ ಕಾಮಗಾರಿ ನಿರ್ವಹಿಸಿ. ಸಮುದಾಯದ ಮನವಿ ಆಲಿಸಿ. ಅಂಗವಿಕಲರ ಕಲ್ಯಾಣಕ್ಕಾಗಿ ಇರುವ ಅನುದಾನ ಸರಿಯಾಗಿ ಬಳಸಿ. ಕೊಪ್ಪಳದ ಬಿ.ಟಿ ಪಾಟೀಲ್​ ನಗರದಲ್ಲಿರುವ ಅಂಗವಿಕಲ ಮಹಿಳಾ ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಸಮಸ್ಯೆ ಬಾರದಂತೆ ಎಚ್ಚರ ವಹಿಸಿ. ರಸ್ತೆ, ಚರಂಡಿ ಇನ್ನಿತರ ಕಾಮಗಾರಿ ವೇಳೆ ಆಯಾ ಪ್ರದೇಶ ಲಾನುಭವಿಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ವೈಯಕ್ತಿಕ ಯೋಜನೆಗಳಲ್ಲಿ ಮಾರ್ಗಸೂಚಿ ಅನುಸಾರ ಲಾನುಭವಿಗಳನ್ನು ಆಯ್ಕೆ ಮಾಡಿ. ಅರ್ಹರನ್ನು ಗುರುತಿಸಿ. ಅವರಗೆ ಯೋಜನೆ ಲಾಭ ಒದಗಿಸುವಂತೆ ತಿಳಿಸಿದರು.

ಯೋಜನೆ ಅನುದಾನವನ್ನು ಯಾವ ಉದ್ದೇಶಕ್ಕೆ, ಎಲ್ಲಿ ಬಳಸಲಾಗಿದೆ ? ಕಾಮಗಾರಿ ವಿವರಗಳನ್ನು ಸಾರ್ವಜನಿಕರಿಗೆ ನೀಡಿ. ಆಯಾ ಆರ್ಥಿಕ ವರ್ಷದಲ್ಲೇ ಅನುದಾನ ಬಳಕೆ ಮಾಡಿ. ಕ್ರಿಯಾ ಯೋಜನೆ ಅನುಮೋದನೆಗೊಂಡ ನಂತರ ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ರಚನಾತ್ಮಕವಾಗಿ ಕೆಲಸ ಮಾಡಿ. ಭೌತಿಕ, ಆರ್ಥಿಕ ಪ್ರಗತಿ ವಿವರ ಸಭೆಗೆ ಸಲ್ಲಿಸಿ. ಅನವಶ್ಯಕ ಕಾರಣಗಳನ್ನು ನೀಡಬೇಡಿ. ಒಟ್ಟು ಕಾಮಗಾರಿ ಸಕಾಲದಲ್ಲಿ ಮುಗಿಸಬೇಕೆಂದು ತಾಕೀತು ಮಾಡಿದರು.

ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯಿಂದ ರೇಬಿಸ್​ ರೋಗ ತಡೆಗಟ್ಟುವ ಕುರಿತ ಪೋಸ್ಟರ್​ ಬಿಡುಗಡೆ ಮಾಡಲಾಯಿತು.

ಜಿಪಂ ಸಿಇಒ ವರ್ಣಿತ್​ ನೇಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಸಮಾಜ ಕಲ್ಯಾಣ ಉಪನಿದೇಶಕ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಪಶುಪಾಲನಾ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಜಿಲ್ಲಾ ಆಯುಷ್​ ಅಧಿಕಾರಿ ಪಿ.ಬಿ.ಹಿರೇಗೌಡರ, ಡಿಡಿಪಿಐ ಸೋಮಶೇಖರಗೌಡ ಪಾಟೀಲ್​, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಡಿ. ಇತರರಿದ್ದರು.